Home Mangalorean News Kannada News ಪ್ರಧಾನಿ ಬಗ್ಗೆ ಐವನ್ ಹೇಳಿಕೆ,‘ಅವಿವೇಕದ ಪರಮಾವಧಿ’ : ಕೋಟ ಶ್ರೀನಿವಾಸ ಪೂಜಾರಿ ಟೀಕೆ

ಪ್ರಧಾನಿ ಬಗ್ಗೆ ಐವನ್ ಹೇಳಿಕೆ,‘ಅವಿವೇಕದ ಪರಮಾವಧಿ’ : ಕೋಟ ಶ್ರೀನಿವಾಸ ಪೂಜಾರಿ ಟೀಕೆ

Spread the love

ಪ್ರಧಾನಿ ಬಗ್ಗೆ ಐವನ್ ಹೇಳಿಕೆ,‘ಅವಿವೇಕದ ಪರಮಾವಧಿ’ : ಕೋಟ ಶ್ರೀನಿವಾಸ ಪೂಜಾರಿ ಟೀಕೆ

ಮಂಗಳೂರು: ಇಡೀ ಜಗತ್ತೇ ಗೌರವಿಸುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಜೈಲಿಗಟ್ಟುವ ಅವಹೇಳನದ ಮಾತಾಡುವ ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ರವರ ಹೇಳಿಕೆ ಮೂರ್ಖತನದ ಪರಮಾವಧಿ ಎಂದು ಶಾಸಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

kota-shrivasa-poojary

ನೋಟು ರದ್ಧತಿಯ ವಿಚಾರದಲ್ಲಿ ಪ್ರಧಾನಿಯನ್ನು ಗುರಿ ಮಾಡುವ ಮೊದಲು ಐವನ್, ದೇಶದಲ್ಲಿ ಒಟ್ಟು ಚಲಾವಣೆಯ ಶೇ.86 ರಷ್ಟು ಮೌಲ್ಯದ ನೋಟುಗಳನ್ನು ಅಪಮೌಲ್ಯಗೊಳಿಸಿದಾಗ ಭಾರತೀಯರು ಶೇ.90 ಮಂದಿ ಪ್ರಧಾನಿಯ ನಿರ್ಧಾರವನ್ನು ಸಾವ್ರತ್ರಿಕವಾಗಿ ಬೆಂಬಲಿಸಿದರು ಎನ್ನುವುದು ಅರ್ಥೈಸಿಕೊಳ್ಳಬೇಕು. ಹಿಂದೆ ರಷ್ಯಾ, ಉತ್ತರಕೊರಿಯಾ, ಮ್ಯಾನ್ಮರ್ ನಂತಹ ದೇಶಗಳು ಕರೆನ್ಸಿ ನಿಷೇಧ ಮಾಡಿದಾಗ ಅಲ್ಲಿಯ ಜನ ವಿರೋಧಿಸಿದ್ದು, ಆಯಾಯ ದೇಶದ ಮುಖಂಡರ ಮೂಲ ಉದ್ದೇಶದ ಮೇಲೆ ವಿಶ್ವಾಸ ಕಳಚಿಕೊಂಡಿದ್ದರಿಂದ.

ಆದರೆ ಭಾರತದ ಪ್ರಧಾನಿ ಮೋದಿಯವರ ನೋಟು ರದ್ಧತಿಯ ಹಿಂದೆ ಕಾಳಧನಿಕರನ್ನು ಮಟ್ಟ ಹಾಕುವುದು, ಖೋಟಾನೋಟುಗಳನ್ನು ನಿಯಂತ್ರಿಸುವುದು, ‘ಕಾಂಗ್ರೆಸ್ ಸರಕಾರದ ಉಡುಗೊರೆಯಾದ ಕಾಶ್ಮೀರದ ಕಣಿವೆಯಲ್ಲಿ ಹಣಕೊಟ್ಟು ದಂಗೆ ಮಾಡುವ ರಾಷ್ಟ್ರವಿರೋಧಿ ಶಕ್ತಿಗಳನ್ನು ತಡೆದು ಶಾಂತಿ ಕಾಪಾಡುವುದು’ ಎಂದು ಅರ್ಥೈಸಿಕೊಂಡ ಭಾರತೀಯರು ಮೋದಿ ಬೆಂಬಲಕ್ಕೆ ನಿಂತದ್ದು ಕಂಡೂ ಸಹ ಪ್ರಧಾನಿಯ ಬಗ್ಗೆ ಲಘು ಮಾತು ಶಬ್ಧ ಬಳಸುವುದು ಮುಖ್ಯ ಸಚೇತಕರ ಹುದ್ದೆಯ ಘನತೆಗೆ ತಕ್ಕುದ್ದಲ್ಲ ಎಂದು ಪೂಜಾರಿ ವ್ಯಂಗವಾಡಿದ್ದಾರೆ.

ದೇಶದ ಅರ್ಥವ್ಯವಸ್ಥೆ ಮತ್ತು ರಕ್ಷಣಾ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂಬುದು ಈ ನಾಡಿನ ಸತ್ಸಂಪ್ರದಾಯ. ಪಾಕಿಸ್ತಾನ ಗಡಿಯೊಳಗೆ ಕಣ್ಣುಮುಚ್ಚಾಲೆ ಆಡುವುದಕ್ಕೆ “ಸರ್ಜಿಕಲ್ ಸ್ಟ್ರೈಕ್”ರೂಪದಲ್ಲಿ ಪ್ರಧಾನಿಯವರು ಉತ್ತರ ಕೊಟ್ಟಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಬುಡಮೇಲೆ ಮಾಡುವ ಕಾಳಧನಿಕರನ್ನು ನಿಯಂತ್ರಿಸಲು ಮೋದಿ ದಿಟ್ಟ ನಿಲುವಿನಿಂದ ನೋಟು ಅಮಾನ್ಯ ಮಾಡಿದ ಹೆಜ್ಜೆಯನ್ನು “ಆರ್ಥಿಕ ಸರ್ಜಿಕಲ್ ಸ್ಟ್ರೈಕ್” ಎಂದು ಪ್ರತಿ ರಾಷ್ಟ್ರಪ್ರೇಮಿಯೂ ಸ್ವಾಗತಿಸುವಾಗ ಐವನ್ ರ ಹೇಳಿಕೆ ಅವರ ಬಗ್ಗೆ ವಿಚಾರಶೀಲರಲ್ಲಿ ಆತಂಕ ಮೂಡಿಸಿದೆ ಎಂದು ಕೋಟ ವಿವರಿಸಿದ್ದಾರೆ.

‘ನೋಟು ಅಪಮೌಲ್ಯವನ್ನು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಆರೋಗ್ಯ ಮಂತ್ರಿ ರಮೇಶ್ ಕುಮಾರ್ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪರವರು ಸಾರ್ವಜನಿಕವಾಗಿ ಸ್ವಾಗತಿಸಿದ ಉದ್ದೇಶವೇನೆಂದು ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಳ್ಳಿ. ಕೇಂದ್ರ ಸರಕಾರದಿಂದ ಸಕಾಲದಲ್ಲಿ ನೋಟು ಬಿಡುಗಡೆಯಾದರೂ,ನಿಮ್ಮದೇ ಸರ್ಕಾರದ ಚಿಕ್ಕರಾಯಪ್ಪ ಮತ್ತು ಜಯಚಂದ್ರರಂತಹ ಅಧಿಕಾರಿಗಳ ಮೂಲಕ ಕಣ್ಣುಮುಚ್ಚಾಲೆಯಾಡಿ ಕರ್ನಾಟಕದಲ್ಲಿ ಜನರ ಕೈಗೆ ನೋಟು ಸಿಗದಂತೆ ಮಾಡಲೆತ್ನಿಸಿದವರು, ಕಾಂಗ್ರೆಸಿನ ನವನಾಯಕಿಯೋರ್ವಳನ್ನು ಬಿಟ್ಟು ಸಂತೆ ಮಾರ್ಕೇಟಿನಲ್ಲಿ ನೋಟು ರದ್ಧತಿಯ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಮಾತಾಡಿದ್ದಕ್ಕೆ ಬಡವರಿಂದ ಬಿರುನುಡಿಗಳನ್ನು ಕೇಳಿದವರು ಇಂದು ಬೀದಿಗಿಳಿದು ಹೋರಾಟ ಮಾಡಿದರೆ, ರಾಜ್ಯವಾಳುವ ಪಕ್ಷ ಅಪಹಾಸ್ಯಕ್ಕೀಡಾಗಲಿದೆ’, ಎಂದು ಕೋಟ ಐವನ್ ಗೆ ಕಿವಿಮಾತು ಹೇಳಿದ್ದಾರೆ.

ನೋಟು ನಿಷೇಧದ ಅಂತಿಮ ದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಗರ್ಭಿಣಿ ಮಹಿಳೆಯರಿಗೆ ನೀಡಿದ ಆರ್ಥಿಕ ನೆರವು, ರೈತರ ಸಾಲದ ಬಡ್ಡಿಗೆ ನೀಡಿದ ವಿನಾಯಿತಿ, ಮನೆ ನಿರ್ಮಾಣ ಸಾಲಕ್ಕೆ ಬಡ್ಡಿ ಸಬ್ಸಿಡಿ ಇವುಗಳನ್ನೆಲ್ಲಾ ಸ್ವಾಗತಿಸುವ ಬದಲು ಐವನ್ ಡಿಸೋಜರ ಹೊಣೆಗೇಡಿತನ ಮತ್ತು ಅಹಂಕಾರದ ಮಾತುಗಳಿಗೆ ಮುಂದಿನ ಚುನಾವಣೆಯಲ್ಲಿ ಜನಸಾಮಾನ್ಯರು ಉತ್ತರ ಕೊಡಲಿದ್ದಾರೆಂದು ಹೇಳಿದ ಕೋಟ, ನಿಮ್ಮದೇ ಶೈಲಿಯಲ್ಲಿ ಉತ್ತರ ಕೊಡಲೂ ನಮಗೂ ಬರುತ್ತದೆ ಎಂದು ನೀವು ತಿಳಿದುಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.


Spread the love

Exit mobile version