ಪ್ರಸಾದ್ ಕಾಂಚನ್ ಅಪ್ರಬುದ್ಧ ಹೇಳಿಕೆ ಕಾಂಗ್ರೆಸ್ ಪಕ್ಷದ ಘನತೆಗೆ ಶೋಭೆಯಲ್ಲ : ಅಜಿತ್ ಕಪ್ಪೆಟ್ಟು
ಉಡುಪಿ: ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಪ್ರಸಾದ್ ಕಾಂಚನ್ ತನ್ನ ಅಸ್ತಿತ್ವವನ್ನು ತೋರಿಸಲು ಪ್ರತತೀ 3 ತಿಂಗಳಿಗೊಮ್ಮೆ ನೀಡುವ ಪತ್ರಿಕಾ ಹೇಳಿಕೆಯಲ್ಲಿ ಉಡುಪಿ ಶಾಸಕರನ್ನು ಟೀಕಿಸುವ ಭರದಲ್ಲಿ ಏಕವಚನ ಶಬ್ದ ಪ್ರಯೋಗ ಮಾಡಿರುವುದು ಅವರ ರಾಜಕೀಯ ಹತಾಶೆ ಮತ್ತು ಅಪ್ರಬುದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಹೇಳಿಕೆ ಕಾಂಗ್ರೆಸ್ ಪಕ್ಷದ ಘನತೆಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ಉಡುಪಿ ನಗರ ಎಸ್.ಸಿ. ಮೋರ್ಚಾ ಅಧ್ಯಕ್ಷ ಅಜಿತ್ ಕಪ್ಪೆಟ್ಟು ಲೇವಡಿ ಮಾಡಿದ್ದಾರೆ.
ಉಡುಪಿ ಕಾಂಗ್ರೆಸ್ ನಲ್ಲಿ ಚಲಾವಣೆ ಇಲ್ಲದ ನಾಣ್ಯದಂತಿರುವ ಪ್ರಸಾದ್ ಕಾಂಚನ್ ಉಡುಪಿ ಶಾಸಕರನ್ನು ಟೀಕಿಸುವ ಮೂಲಕ ಪುಕ್ಕಟೆ ಪ್ರಚಾರ ಪಡೆಯುವುದನ್ನೇ ತನ್ನ ರಾಜಕೀಯ ಸಾಧನೆ ಎಂದು ಭಾವಿಸಿದಂತಿದೆ. ರಾಜಕೀಯದಲ್ಲಿ ತನ್ನ ಸೋಲನ್ನೇ ಅರಗಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಯಿಂದ ಉಡುಪಿಯ ಜನತೆ ಇನ್ನೇನೂ ಹೆಚ್ಚಿನದ್ದನ್ನು ನಿರೀಕ್ಷಿಸುವುದು ಅಸಾಧ್ಯವೆಂಬುದನ್ನು ಕಾಂಚನ್ ರುಜುವಾತುಪಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಡಾ! ವಿ.ಎಸ್. ಆಚಾರ್ಯ, ಆಸ್ಕರ್ ಫೆರ್ನಾಂಡೀಸ್, ಮಲ್ಪೆ ಮಧ್ವರಾಜ್, ಯು.ಆರ್. ಸಭಾಪತಿ, ಪ್ರಮೋದ್ ಮಧ್ವರಾಜ್ ರಂತಹ ವ್ಯಕ್ತಿಗಳು ಜನಪ್ರತಿನಿಧಿಗಳಾಗಿ ಸಭ್ಯತೆಯ ರಾಜಕೀಯ ಮಾಡಿದ್ದು, ತಮ್ಮ ರಾಜಕೀಯ ಸಿದ್ಧಾಂತಗಳು ಭಿನ್ನವಾಗಿದ್ದರೂ ತಮ್ಮ ವಿರೋಧಿಗಳನ್ನು ಅತ್ಯಂತ ಸಭ್ಯ ರೀತಿಯಲ್ಲಿ ಟೀಕಿಸಿ ಘನತೆ ಮೆರೆದಿದ್ದರೂ ಉಡುಪಿಯಲ್ಲಿ ಪ್ರಸಾದ್ ಕಾಂಚನ್ ರಂತಹ ವ್ಯಕ್ತಿಗಳು ಉಡುಪಿಯ ಪಾಲಿಗೆ ಕಪ್ಪು ಚುಕ್ಕೆಯಾಗಿದ್ದಾರೆ.
ಸದಾ ತನ್ನನ್ನು ತಾನು ವಿದ್ಯಾವಂತ, ಯಶಸ್ವಿ ಉದ್ಯಮಿ ಎಂದು ಬಿಂಬಿಸಲು ಯತ್ನಿಸುವ ಪ್ರಸಾದ್ ಕಾಂಚನ್ ಹೇಳಿಕೆಗಳು ಮಾತ್ರ ಸದಾ ತದ್ವಿರುದ್ಧವಾಗಿರುತ್ತದೆ.
ಬಡಾನಿಡಿಯೂರು ಗ್ರಾಮದಲ್ಲಿ ಮಾಜಿ ಶಾಸಕರ ಒಡೆತನದ ಅಕ್ರಮ ರೆಸಾರ್ಟ್ ಕಾಮಗಾರಿಗೆ ಪರೋಕ್ಷ ಸಹಕಾರ ನೀಡಿ, ತನ್ನದೇ ಬಡಾನಿಡಿಯೂರು ಗ್ರಾಮದ ಜನತೆಗೆ ಅನ್ಯಾಯ ಮಾಡಿ, ಈ ಹಿಂದೆ ಪದ್ಮಪ್ರಿಯಾ ಪ್ರಕರಣ, ಸಿ.ಡಿ. ಪ್ರಕರಣ, ರೇವ್ ಪಾರ್ಟಿ ಬಗ್ಗೆ ಭಾಷಣ ಮಾಡಿ ಈಗ ಅದೇ ವ್ಯಕ್ತಿಯೊಡನೆ ಕೈಜೋಡಿಸಿ ಆಕ್ರಮಕ್ಕೆ ಸಹಕಾರ ನೀಡಿದ ತಮ್ಮ ಪಕ್ಷ ನಿಷ್ಠೆ ಸಾರ್ವಜನಿಕರ ಮುಂದೆ ಬಟ್ಟಾಬಯಲಾಗಿದೆ.
ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರೇ ನಿಮ್ಮ ಪಕ್ಷದ ಪರಾಜಿತ ಅಭ್ಯರ್ಥಿಯ ಕ್ಷುಲ್ಲಕ ಹೇಳಿಕೆಗಳ ಬಗ್ಗೆ ಅವರಿಗೆ ಸ್ವಲ್ಪ ಬುದ್ಧಿ ಮಾತು ಹೇಳಿ ಪಕ್ಷದ ಮರ್ಯಾದೆಯನ್ನು ಉಳಿಸಿಕೊಳ್ಳಿ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರಸಾದ್ ಕಾಂಚನ್ ಹೇಳಿಕೆಗಳು ಪಕ್ಷಕ್ಕೆ ಮುಳುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಜಿತ್ ಕಪ್ಪೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.