ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ… ಇಬ್ಬರು ಯುವಕರು ನೀರುಪಾಲು ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ
ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು ನದಿ ಪಾಲಾದ ದಾರುಣ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಲ್ಗುಣಿ ನದಿಯಲ್ಲಿ ಬುಧವಾರ (ಏ.1) ಮುಂಜಾನೆ ಸಂಭವಿಸಿದೆ. ಕುಂಜತ್ಬೈಲ್ ನಿವಾಸಿಗಳಾದ ಗಣೇಶ್ (28), ರಾಯಲ್ (24) ನೀರುಪಾಲಾದ ಯುವಕರು.
ಬುಧವಾರ ಮುಂಜಾನೆ ಸುಮಾರು 1:30ರ ವೇಳೆಗೆ ಗಣೇಶ್, ರಾಯಲ್ ಹಾಗೂ ನಿತೇಶ್ ಫಲ್ಗುಣಿ ನದಿಗೆ ಮೀನು ಹಿಡಿಯಲು ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ದೋಣಿ ಹಠಾತ್ತನೆ ನದಿಯಲ್ಲಿ ಮಗುಚಿ ಬಿದ್ದಿದೆ. ಈ ಸಮಯ ಈಜಲು ಬಾರದೆ ಗಣೇಶ್ ಹಾಗೂ ರಾಯಲ್ ನೀರುಪಾಲಾಗಿದ್ದು, ನಿತೇಶ್ ಈಜಿ ದಡ ಸೇರಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ತೀವ್ರ ಶೋಧ ಕಾರ್ಯ ನಡೆಸಿದ್ದು ಈ ವೇಳೆ ಗಣೇಶ್ ಎಂಬಾತನ ಮೃತದೇಹ ಪತ್ತೆಯಾಗಿದೆ.ರಾಯಲ್ ಎಂಬಾತನ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
