Home Mangalorean News Kannada News ಫಾಸ್ಟ್ ಟ್ಯಾಗ್ ಪದ್ದತಿ; ಸಾಸ್ತಾನದಲ್ಲಿ ಸ್ಥಳೀಯರಿಗೆ ಹಿಂದಿನ ರಿಯಾಯತಿ ಯಥಾಸ್ಥಿತಿ ಮುಂದುವರಿಕೆ

ಫಾಸ್ಟ್ ಟ್ಯಾಗ್ ಪದ್ದತಿ; ಸಾಸ್ತಾನದಲ್ಲಿ ಸ್ಥಳೀಯರಿಗೆ ಹಿಂದಿನ ರಿಯಾಯತಿ ಯಥಾಸ್ಥಿತಿ ಮುಂದುವರಿಕೆ

Spread the love

ಫಾಸ್ಟ್ ಟ್ಯಾಗ್ ಪದ್ದತಿ; ಸಾಸ್ತಾನದಲ್ಲಿ ಸ್ಥಳೀಯರಿಗೆ ಹಿಂದಿನ ರಿಯಾಯತಿ ಯಥಾಸ್ಥಿತಿ ಮುಂದುವರಿಕೆ

ಉಡುಪಿ: ದೇಶದಾದ್ಯಂತ ಡಿ.1ರಿಂದ ಕೇಂದ್ರ ಸರಕಾರದ ಆದೇಶದಂತೆ ಫಾಸ್ಟ್ ಟ್ಯಾಗ್ ಪದ್ದತಿ ಜಾರಿಗೆ ಬರಲಿದ್ದು ಇದರಿಂದ ಸಾಸ್ತಾನ ಟೋಲ್ ವ್ಯಾಪ್ತಿಯ ಮಾಬುಕಳದಿಂದ ಕೋಟ ವರೆಗಿನ 14 ಗ್ರಾಮಗಳ ವಾಹನ ಸವಾರರಿಗೆ ಕಳೆದ ವರ್ಷದಿಂದ ಇದ್ದ ರಿಯಾಯತಿ ವ್ಯವಸ್ಥೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಕೋಟ ಪೊಲೀಸ್ ಠಾಣಾಧಿಕಾರಿ ನಿತ್ಯಾನಂದ ಗೌಡ ಹೇಳಿದರು.

ಸಾಸ್ತಾನದ ಶಿವಕೃಪಾ ಕಲ್ಯಾಣಮಂಟಪದಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶದಂತೆ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ನಿರ್ದೇಶನದಲ್ಲಿ ನಡೆದ ಫಾಸ್ತ್ಯಾಗ್ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಸ್ತಾನ ಟೋಲ್ನಲ್ಲಿ ಮಾಬುಕಳದಿಂದ ಮಣೂರು ತನಕ 14 ಗ್ರಾಮಗಳಿಗೆ ಈಗಿರುವ ಪದ್ದತಿ ಮುಂದುವರಿಯಲಿದೆ. ಆದರೆ ಎಲ್ಲರೂ ಫಾಸ್ತ್ಯಾಗ್ನ್ನು ಅಳವಡಿಸಿಕೊಳ್ಳಲೇ ಬೇಕಾಗಿರುವುದು ಅನಿವಾರ್ಯವಾಗಿದೆ. ಟೋಲ್ನ ಹತ್ತು ಗೇಟ್ಗಳಲ್ಲಿ ಸ್ಥಳೀಯರಿಗೆ ಎರಡು ಭಾಗದಲ್ಲಿ ಒಂದೊಂದು ಗೇಟ್ ಮುಕ್ತಗೊಳಿಸಲಾಗಿದೆ. ಇನ್ನುಳಿದಂತೆ ಎರಡು ಭಾಗದ ನಾಲ್ಕು ಗೇಟ್ ಗಳಲ್ಲಿ ಫಾಸ್ತ್ಯಾಗ್ ಅಳವಡಿಸಿಕೊಂಡು ಹೋಗಬೇಕಾಗಿದೆ. ಸ್ಥಳೀಯರಿಗೆ ಮತ್ತು ಫಾಸ್ತ್ಯಾಗ್ ಅಳವಡಿಸಿರದ ವಾಹನಗಳ ಟೋಲ್ ವಸೂಲಿಗೆ ಹೆಚ್ಚುವರಿ ಸಿಬ್ಬಂದಿ ಮತ್ತು ಸ್ಪೈಪ್ ಮಿಷನ್ನ್ನು ಅಳವಡಿಸಿಕೊಳ್ಳಲು ತಿಳಿಸಲಾಗಿದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು.

ಬ್ರಹ್ಮಾವರದ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಮಾತನಾಡಿ ದೇಶದಾದ್ಯಂತ ಈಗಾಗಲೇ ಡಿಜಿಟಲ್ ವ್ಯವಸ್ಥೆಗೆ ಎಲ್ಲವನ್ನು ಬದಲಾವಣೆ ಮಾಡಲಾಗುತ್ತಿದ್ದು ಜನರು ಅದನ್ನು ಸ್ವೀಕರಿಸುತ್ತಿದ್ದಾರೆ. ಅದರಂತೆ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಮಾಡುವುದರ ಮೂಲಕ ಟೋಲ್ ಸಂಗ್ರಹದಲ್ಲಿ ಹೊಸತನ ಪರಿಚಯಿಸಲಾಗುತ್ತಿದ್ದು, ಹೊಸತನಕ್ಕೆ ನಾವು ಬದಲಾಗಲೇ ಬೇಕಾಗಿದೆ. ಸಮಸ್ಯೆಗಳಿಗೆ ಉದ್ವೇಗ ಆಗದೇ ಪರಿಹಾರವನ್ನು ಕಂಡುಕೊಳ್ಳುವತ್ತ ಗಮನ ಹರಿಸುವುದು ಉತ್ತಮ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನ್ ಮಾತನಾಡಿ ಸುಂಕ ವಸೂಲಾತಿ ಕೇಂದ್ರಗಳಲ್ಲಿ ವಾಹನ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಫಾಸ್ಟ್ ಟ್ಯಾಗ್ ಪದ್ದತಿಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ನಗದು ರಹಿತ ಶುಲ್ಕ ಪಾವತಿ ಹಾಗೂ ತಡೆರಹಿತ ಸಂಚಾರಕ್ಕೂ ಇದು ಅನುಕೂಲವಾಗಿದೆ. ಇದೇ 28ರಿಂದ ಉಡುಪಿ ಜಿಲ್ಲೆಯ ಟೋಲ್ಗಳಲ್ಲಿ ಫಾಸ್ಟ್ಯಾಗ್ನ್ನು ವಾಹನಗಳನ್ನು ತಂದಲ್ಲಿ ನೀಡಲಾಗುತ್ತಿದೆ. ಇದಲ್ಲದೇ ಪೇಟಿ ಎಂ, ಅಮೆಜಾನ್ ಮತ್ತು ಇನ್ನಿತರ ಕಡೆಗಳಲ್ಲಿಯೂ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ಫಾಸ್ಟ್ಯಾಗ್ ಒಂದು ವೇಳೆ ಹಾಳಾದಲ್ಲಿ ಅದನ್ನು ಹೊಸದಕ್ಕೆ ಬದಲಾಯಿಸಲು ಅವಕಾಶವಿದ್ದು ಹಿಂದಿನ ಫಾಸ್ಟ್ಯಾಗ್ ನಲ್ಲಿ ಇದ್ದ ಹಣವನ್ನು ಹೊಸದಕ್ಕೆ ವರ್ಗಾಯಿಸಿಕೊಳ್ಳಬಹುದು. ಈಗಾಗಲೇ 25 % ಮಂದಿ ಫಾಸ್ಟ್ಯಾಗ್ ವ್ಯವಸ್ಥೆಯನ್ನು ಪಡೆದುಕೊಂಡಿದ್ದು ಉಳಿದವರು ಆದಷ್ಟು ಬೇಗ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.

ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಪ್ರತಾಪ್ ಶೆಟ್ಟಿ ಮಾತನಾಡಿ ಸಾಸ್ತಾನ ಟೋಲ್ನಲ್ಲಿ ಸ್ಥಳೀಯರ ಹೋರಾಟದ ಫಲವಾಗಿ ಸ್ಥಳೀಯರಿಗೆ ರಿಯಾಯಿತಿ ಸಿಗುತ್ತಿದೆ. ಫಾಸ್ತ್ಯಾಗ್ನಿಂದ ಮುಂದೆ ಆಗುವ ಗೊಂದಲಗಳನ್ನು ಜನಪ್ರತಿನಿಧಿಗಳ ಸಮ್ಮುಖದಲ್ಲೇ ಪರಿಹಾರ ಕಂಡುಕೊಂಡಲ್ಲಿ ಉತ್ತಮ. ಸದ್ಯ ಸ್ಥಳೀಯರಿಗೆ ಮತ್ತು ನೇರ ಹಣ ನೀಡುವವರಿಗೆ ಒಂದೇ ಗೇಟ್ ನೀಡುವುದರಿಂದ ವಾಹನಗಳು ಉದ್ದನೆಯ ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ರಸ್ತೆ ದುರಸ್ತಿ ಮಾಡುವ, ಸರ್ವಿಸ್ ರಸ್ತೆ ನಿರ್ಮಿಸುವ, ಅಫಘಾತ ಕಡಿಮೆ ಮಾಡುವ ಬಗ್ಗೆ ಆಸಕ್ತಿ ತೋರಿಸದ ನವಯುಗ ಟೋಲ್ ಸಂಗ್ರಹಿಸುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ ಎಂದು ಆಗಮಿಸಿದ್ದ ಸ್ಥಳೀಯರು ಹೇಳಿದರು.

ಸಭೆಯಲ್ಲಿ ಸಾಸ್ತಾನ ಟೋಲ್ನ ಕೇಶವಮೂರ್ತಿ, ಹೋರಾಟ ಸಮಿತಿಯ ಪ್ರತಾಪ್ ಶೆಟ್ಟಿ ಸಾಸ್ತಾನ, ವಿಠಲ್ ಪೂಜಾರಿ, ಅಲ್ವಿನ್ ಅಂದ್ರಾದೆ, ಶ್ಯಾಮಸುಂದರ ನಾಯರಿ, ನಾಗರಾಜ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version