Home Mangalorean News Kannada News ಬಂಟ್ವಾಳ ಕ್ರೈಸ್ತರ ನಿಶ್ಚಿತಾರ್ಥ ಕಾರ್ಯದಲ್ಲಿ ಅನುಮತಿ ಪಡೆಯದೆ ಮದ್ಯ ಸರಬರಾಜು ; ಅಬಕಾರಿ ಇಲಾಖೆ ಸ್ಪಷ್ಟನೆ

ಬಂಟ್ವಾಳ ಕ್ರೈಸ್ತರ ನಿಶ್ಚಿತಾರ್ಥ ಕಾರ್ಯದಲ್ಲಿ ಅನುಮತಿ ಪಡೆಯದೆ ಮದ್ಯ ಸರಬರಾಜು ; ಅಬಕಾರಿ ಇಲಾಖೆ ಸ್ಪಷ್ಟನೆ

Spread the love

ಬಂಟ್ವಾಳ ಕ್ರೈಸ್ತರ ನಿಶ್ಚಿತಾರ್ಥ ಕಾರ್ಯದಲ್ಲಿ ಅನುಮತಿ ಪಡೆಯದೆ ಮದ್ಯ ಸರಬರಾಜು ; ಅಬಕಾರಿ ಇಲಾಖೆ ಸ್ಪಷ್ಟನೆ

ಮಂಗಳೂರು: ಮದುವೆ ಹಾಗೂ ಇತರೆ ಸಾಂಪ್ರದಾಯಿಕ ಖಾಸಗಿ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ ನಿಯಮಾನುಸಾರ ಅಬಕಾರಿ ಇಲಾಖೆ ಅನುಮತಿ ಪಡೆಯಬೇಕು ಎಂದು ಅಬಕಾರಿ ಇಲಾಖೆ ಸ್ಪಷ್ಟಪಡಿಸಿದೆ.

ಕರ್ನಾಟಕ ಅಬಕಾರಿ ನಿಯಮದಂತೆ ಒಬ್ಬ ವ್ಯಕ್ತಿಯು 2.300 ಲೀಟರ್ ಭಾರತೀಯ ತಯಾರಕ ಮದ್ಯ ಹಾಗೂ 18.200 ಲೀಟರ್ ಬಿಯರ್ ದಾಸ್ತಾನು ಹೊಂದಿರಬಹುದಾಗಿದ್ದು, ಲೈಸನ್ಸ್ ಇಲ್ಲದೇ ಇದಕ್ಕಿಂತ ಜಾಸ್ತಿ ದಾಸ್ತಾನು ಇಡುವುದು ಅಬಕಾರಿ ಕಾಯಿದೆಯಂತೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಯಾವುದೇ ಖಾಸಗೀ ಕಾರ್ಯಕ್ರಮದಲ್ಲಿ ಮದ್ಯ ಸರಬರಾಜು ಮಾಡಲು ಅಬಕಾರಿ ನಿಯಮದಂತೆ ಸಿಎಲ್-5 ಸಾಂದರ್ಭಿಕ ಸನ್ನದನ್ನು ಪಡೆಯಬೇಕಾಗುತ್ತದೆ.

ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಡ್ಯಾನಿಯಲ್ ಡಿಸಿಲ್ವ ಎಂಬವರ ಮನೆಯಲ್ಲಿ ಅಕ್ರಮ ಮದ್ಯ ಮತ್ತು ಬಿಯರ್ ದಾಸ್ತಾನು ಇರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಏ.14ರಂದು ಬಂಟ್ವಾಳ ಅಬಕಾರಿ ಉಪಅಧೀಕ್ಷಕರು ಅವರ ಮನೆಗೆ ದಾಳಿ ಮಾಡಿದಾಗ, 21.375 ಲೀಟರ್ ಮದ್ಯ ಹಾಗೂ 250 ಲೀಟರ್ ಬಿಯರ್ ದಾಸ್ತಾನು ಕಂಡುಬಂದಿದ್ದು, ಮದ್ಯವನ್ನು ಮನೆಯಲ್ಲಿ ರೋಸ್ ಕಾರ್ಯಕ್ರಮ ನಿಮಿತ್ತ ವಿತರಿಸಲು ತಂದಿರುವುದಾಗಿ ತಿಳಿಸಿರುತ್ತಾರೆ. ಸದರಿ ಮದ್ಯ ನೀಡಲು ಅಬಕಾರಿ ಇಲಾಖೆಯಿಂದ ಯಾವುದೇ ಲೈಸನ್ಸನ್ನು ಪಡೆದಿರುವುದಿಲ್ಲ ಎಂದು ಆ ಸಂದರ್ಭದಲ್ಲಿ ಡ್ಯಾನಿಯಲ್ ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಕಂಡು ಬಂದ ಹಿನ್ನೆಲೆಯಲ್ಲಿ ಡ್ಯಾನಿಯಲ್ ಡಿಸಿಲ್ವ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಚುನಾವಣೆ ನೀತಿ ಸಂಹಿತೆ ಅಡ್ಡಿ ಇಲ್ಲ: ಖಾಸಗೀ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಲು ಚುನಾವಣೆ ನೀತಿ ಸಂಹಿತೆಯು ಅಡ್ಡಿಯಾಗುವುದಿಲ್ಲ. ಆದರೆ ಅಬಕಾರಿ ಇಲಾಖೆಯ ಸನ್ನದು ಪಡೆಯಬೇಕು. ಇದು ನಿರಂತರ ಪ್ರಕ್ರಿಯೆಯಾಗಿದೆ. “ ಖಾಸಗೀ ಸಭೆ ಸಮಾರಂಭಗಳಲ್ಲಿ ಯಾವುದೇ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಗಳ ಕೊಡುಗೆಯನ್ನು ಸ್ವೀಕರಿಸದೆ ಅಥವಾ ರಾಜಕೀಯ ಚಟುವಟಿಕೆಗಳು ಒಳಗೊಳ್ಳದೇ ಇದ್ದಲ್ಲಿ, ಅಬಕಾರಿ ಕಾಯಿದೆ ಪ್ರಕಾರ ಮದುವೆ ಹಾಗೂ ಇತರೆ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಮದ್ಯವನ್ನು ಬಳಸಲು ಅವಕಾಶ ಇದ್ದಲ್ಲಿ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ” ಎಂದು ರಾಜ್ಯದ ಅಪರ ಮುಖ್ಯ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ದ.ಕ. ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತೆ ಶೈಲಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version