ಬಂಟ್ವಾಳ: ರಸ್ತೆ ಅಪಘಾತ; ಗಾಯಾಳು ಬೈಕ್ ಸವಾರ ಮೃತ್ಯು
ಬಂಟ್ವಾಳ: ಪಾಣೆಮಂಗಳೂರು – ಮೆಲ್ಕಾರ್ ಸಮೀಪದ ಬೋಳಂಗಡಿ ನರಹರಿ ಪರ್ವತ ಬಳಿ ರವಿವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃಪಟ್ಟಿದ್ದಾರೆ.
ಮೃತ ಬೈಕ್ ಸವಾರನನ್ನು ಪುತ್ತೂರು ನಿವಾಸಿ ಅಶೋಕ್ (34) ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಾರುತಿ ಕಾರು ಹಾಗೂ ಬೈಕ್ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ.
ಬಿ.ಸಿ. ರೋಡ್ ಕಡೆಗೆ ಸಂಚರಿಸುತ್ತಿದ್ದ ಕಾರಿಗೆ ವಿರುದ್ದ ದಿಕ್ಕಿನಿಂದ ಒನ್ ವೇ ನಿಯಮ ಉಲ್ಲಂಘಿಸಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಭೀಕರತೆಗೆ ಕಾರು ಹಾಗೂ ಬೈಕ್ ಎರಡೂ ವಾಹನಗಳು ಸಂಪೂರ್ಣ ಜಖಂಗೊಂಡಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಶೋಕ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
