ಬಜಪೆ: ಬಿಹಾರದಿಂದ ರೈಲಿನಲ್ಲಿ ಗಾಂಜಾ ಸಾಗಾಟ–ಮಾರಾಟ ಯತ್ನ; ಅಂತಾರಾಜ್ಯ ಆರೋಪಿಗಳು ಬಂಧನ
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಗಾಂಜಾವನ್ನು ಬಿಹಾರ ರಾಜ್ಯದಿಂದ ರೈಲು ಮೂಲಕ ಮಂಗಳೂರಿಗೆ ತರಿಸಿ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತಾರಾಜ್ಯ ಆರೋಪಿತರನ್ನು ಬಜಪೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 03-01-2026 ರಂದು ಖಚಿತ ಮಾಹಿತಿಯ ಮೇರೆಗೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ಸಮೀಪ ರಸ್ತೆಯ ಬದಿಯಲ್ಲಿ ದಾಳಿ ನಡೆಸಿದ ಪೊಲೀಸರು, ಸುಮಾರು 1 ಕೆ.ಜಿ ತೂಕದ ಮಾದಕ ವಸ್ತು ಗಾಂಜಾವನ್ನು ವಶದಲ್ಲಿರಿಸಿಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸುನಿಲ್ ಕುಮಾರ್ (40), ತಂದೆ: ನೆಪಾಳಿ ಸಿಂಗ್, ನಿವಾಸಿ: ಮಹದ್ದೀಪುರ, ಮೆಹ್ದೀಪುರ, ಖಗರಿಯಾ, ಬಿಹಾರ ರಾಜ್ಯ (ಹಾಲಿ ವಾಸ: ಕೃಷ್ಣಾಪುರ, ಕಾಟಿಪಳ್ಳ, ಸುರತ್ಕಲ್), ಬ್ರಿಜೇಶ್ ಶ್ರೀವಾಸ್ತವ (42), ತಂದೆ: ರಾಧೇಶ್ಯಾಮ್, ನಿವಾಸಿ: ಭೌರಹಿ, ಚುನಾ೯ರ್, ಮಿರ್ಜಾಪುರ, ಉತ್ತರ ಪ್ರದೇಶ (ಹಾಲಿ ವಾಸ: ಕೃಷ್ಣಾಪುರ, ಕಾಟಿಪಳ್ಳ, ಸುರತ್ಕಲ್) ಎಂದು ಗುರುತಿಸಲಾಗಿದೆ.
ಆರೋಪಿತರ ವಿಚಾರಣೆಯಲ್ಲಿ, ಬಿಹಾರ ರಾಜ್ಯದಲ್ಲಿ ಗಾಂಜಾವನ್ನು ಖರೀದಿಸಿ ರೈಲಿನಲ್ಲಿ ಮಂಗಳೂರಿಗೆ ತಂದು ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಆರೋಪಿತರಿಂದ ಸುಮಾರು 1 ಕೆ.ಜಿ ಗಾಂಜಾವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 08/2026ರಡಿ ಕಲಂ 8(c), 20(b)(ii)(a) ಎನ್‌ಡಿಪಿಎಸ್ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
