ಬಜಪೆ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್–ಬೆದರಿಕೆ ಕಾಮೆಂಟ್ ಪ್ರಕರಣ: ಸ್ವಯಂಪ್ರೇರಿತ ದೂರು ದಾಖಲಿಸಿದ ಪೊಲೀಸರು
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 27-12-2025ರಂದು ನಾರ್ಲಪದವು ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಗೂ ಬೆದರಿಕೆ ಕಾಮೆಂಟ್ ಮಾಡಿದ ಪ್ರಕರಣದಲ್ಲಿ ಬಜಪೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬವರು ತಮ್ಮ ಮಗಳನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದ ಕುರಿತು ಒಂದು ಪ್ರಕರಣ ದಾಖಲಾಗಿದ್ದು, ಇದೇ ವೇಳೆ ಅಬ್ದುಲ್ ಸತ್ತಾರ್ ಅವರನ್ನು ಸುಮೀತ್ ಮತ್ತು ಎಂ. ರಜತ್ ನಾಯಕ್ ಎಂಬವರು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ ಬಗ್ಗೆ ಮತ್ತೊಂದು ಪ್ರತ್ಯೇಕ ಪ್ರಕರಣ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ.
ಈ ಘಟನೆಗಳಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ muslim__leader ಎಂಬ ಪೇಜ್‌ನಲ್ಲಿ ಇಬ್ಬರು ಯುವಕರ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಸಂಘಟನೆಗಳು ಮತ್ತು ಸಮುದಾಯಗಳನ್ನು ಗುರಿಯಾಗಿಸಿಕೊಂಡು ತೀವ್ರ ಆಕ್ಷೇಪಾರ್ಹ, ಪ್ರಚೋದನಕಾರಿ ಭಾಷೆಯಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ಲದೆ instg4ama ಎಂಬ ಇನ್‌ಸ್ಟಾಗ್ರಾಂ ಐಡಿಯಿಂದ ಸದ್ರಿ ಪೋಸ್ಟ್‌ಗೆ “ಇವರಿಗೆ ಸುಹಾಸ್ ಶೆಟ್ಟಿ ಟ್ರೀಟ್‌ಮೆಂಟ್ ಕೊಡಬೇಕು ಸದ್ಯದಲ್ಲಿ” ಎಂಬ ಬೆದರಿಕೆಯ ಕಾಮೆಂಟ್ ಮಾಡಿರುವುದು ಗಮನಕ್ಕೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವರ್ಗ ವರ್ಗಗಳ ಹಾಗೂ ಸಮುದಾಯಗಳ ನಡುವೆ ದ್ವೇಷ, ಅಶಾಂತಿ ಉಂಟುಮಾಡುವ ಉದ್ದೇಶದಿಂದ ಈ ಪೋಸ್ಟ್ ಹಾಗೂ ಕಾಮೆಂಟ್ ಮಾಡಲಾಗಿದೆ ಎಂದು ಪರಿಗಣಿಸಿದ ಬಜಪೆ ಪೊಲೀಸರು, ಮೊ.ನಂ 07/2026ರಡಿ ಕಲಂ 351(2), 351(3), 352, 353(2), 192 BNS-2023 ಅನ್ವಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿತರನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಜಪೆ ಪೊಲೀಸರು ತಿಳಿಸಿದ್ದಾರೆ.
