Home Mangalorean News Kannada News ಬಜ್ಪೆ: ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ವಿರುದ್ಧ ಯುವತಿ ಮೇಲೆ ದೌರ್ಜನ್ಯ ಪ್ರಕರಣ

ಬಜ್ಪೆ: ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ವಿರುದ್ಧ ಯುವತಿ ಮೇಲೆ ದೌರ್ಜನ್ಯ ಪ್ರಕರಣ

Spread the love

ಬಜ್ಪೆ: ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ವಿರುದ್ಧ ಯುವತಿ ಮೇಲೆ ದೌರ್ಜನ್ಯ ಪ್ರಕರಣ

ಮಂಗಳೂರು: ಯುವತಿಯೋರ್ವಳ ಮೇಲೆ ನಿರಂತರ ಲೈಂಗಿಕ ಕಿರುಕುಳ, ಅತ್ಯಾಚಾರ ಯತ್ನ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಹಿಂದೂ ಜಾಗರಣ ವೇದಿಕೆಯ ಮುಖಂಡ ಮತ್ತು ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಆಪ್ತ ಸಮಿತ್ ರಾಜ್ ಅಲಿಯಾಸ್ ಸಮಿತ್ ರಾಜ್ ಧರೆಗುಡ್ಡೆ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 27ರಂದು ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯ ದೂರಿನ ಪ್ರಕಾರ, 2023ರಲ್ಲಿ ತಮ್ಮ ಸಹೋದರನ ಅಪಘಾತ ಸಂದರ್ಭ ಪರಿಚಯವಾದ ಸಮಿತ್ ರಾಜ್ ಆಕೆಯೊಂದಿಗೆ ಹತ್ತಿರವಾಗುತ್ತಾ ಪ್ರೀತಿಸುವಂತೆ ನಟಿಸಿ ಮದುವೆಯಾಗುವುದಾಗಿ ಹೇಳಿದ್ದ. ಆದರೆ ನಂತರ ನಿರಂತರವಾಗಿ ಕರೆ ಮಾಡಿ, ಬೆದರಿಸಿ, ಕಾಲೇಜು ಹಾಗೂ ಮನೆ ಬಳಿ ಬಂದು ಕಿರುಕುಳ ನೀಡುತ್ತಿದ್ದ.

2023ರ ಮಾರ್ಚ್ 23ರಂದು ಕಾಲೇಜು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಆರೋಪಿಯು ಕಾರಿನಲ್ಲಿ ಬಂದು ಆಕೆಯನ್ನು ಕರೆದೊಯ್ದು, ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬಲಾತ್ಕಾರವಾಗಿ ಬಟ್ಟೆ ಬಿಚ್ಚಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಜೋರಾಗಿ ಬೊಬ್ಬೆ ಹೊಡೆದಾಗ ಬಾಯಿಗೆ ಕೈ ಅಡ್ಡ ಇಟ್ಟು, ಈ ವಿಚಾರ ಯಾರಲ್ಲಾದರೂ ಹೇಳಿದರೆ ಮನೆಗೆ ಬಂದು ನನ್ನನ್ನು ಮತ್ತು ನನ್ನ ಮನೆಯವರನ್ನು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಆ ಬಳಿಕ ಯುವತಿಯನ್ನು ಹಲವು ಬಾರಿ ಆತನೊಂದಿಗೆ , ಹೋಗಲು ಒಪ್ಪದೇ ಇದ್ದಾಗ ಆಶ್ಲೀಲ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನ ಹರಾಜು ಹಾಕುವುದಾಗಿ ಬೆದರಿಸುತ್ತಿದ್ದ. ಅಲ್ಲದೆ, ನಗ್ನ ಫೊಟೊಗಳನ್ನೂ ಕಳುಹಿಸುವಂತೆ ಒತ್ತಾಯಿಸುತ್ತಿದ್ದ ಕಾರಣ ಯುವತಿ ನಗ್ನ ಫೊಟೊಗಳನ್ನೂ ಕಳುಹಿಸಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ಮಾಹಿತಿ ನೀಡಿದ್ದಾಳೆ.

ಆರೋಪಿ ಸಮಿತ್ ರಾಜ್ ನ ಕಿರುಕುಳ ಹೆಚ್ಚಾದಾಗ ಮೂಡುಬಿದಿರೆ ಶಾಸಕರಿಗೆ ಹೇಳುವುದಾಗಿ ಹೇಳಿದಾಗ, “ನಾನು ಪ್ರಭಾವಿ ವ್ಯಕ್ತಿಯಾಗಿದ್ದು, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಮಟ್ಟದ ನಾಯಕನಾಗಿದ್ದೇನೆ ಮತ್ತು ಮೂಡಬಿದ್ರೆ ಶಾಸಕರ ಆಪ್ತನಿದ್ದೇನೆ. ಮೂಡುಬಿದಿರೆ ಶಾಸಕರು ನಾನು ಹೇಳಿದ ಹಾಗೆ ಕೇಳುತ್ತಾರೆ. ನಾನು ಹೇಳಿದರೆ ಅವರು ನನ್ನೊಂದಿಗೆ ಪೊಲೀಸ್ ಸ್ಟೇಷನ್ ಗೂ ಬರುತ್ತಾರೆ. ನನ್ನ ಹಿಂದೆ ಸಂಘಟನೆ ಇದೆ. ಯಾವ ಪೊಲೀಸರೂ ಏನೂ ಮಾಡಲು ಆಗುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, “ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ಈ ಸಂಬಂಧ ಬಜ್ಪೆ ಪೊಲೀಸರು IPC ಸೆಕ್ಷನ್ 354(A), 504, 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.


Spread the love

Exit mobile version