ಬಲೆಯಲ್ಲಿ ಸಿಲುಕಿದ ಹೆಬ್ಬಾವು ರಕ್ಷಣೆ: ಮೆಸ್ಕಾಂ ಸಿಬ್ಬಂದಿಯ ಸಾಹಸಕ್ಕೆ ಮೆಚ್ಚುಗೆ
ಮುಲ್ಕಿ: ಮನೆ ಭಾವಿಗೆ ಕಸ ಬೀಳದಂತೆ ಹಾಕಿದ್ದ ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವೊಂದನ್ನು ಮೆಸ್ಕಾಂ ಸಿಬ್ಬಂದಿ ರಕ್ಷಿಸಿದ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಮನೆಯ ಭಾವಿಗೆ ಕಸ ಬೀಳದಂತೆ ಬಲೆ ಹಾಕಲಾಗಿದ್ದು, ಅದರಲ್ಲಿ ಹೆಬ್ಬಾವು ಸಿಲುಕಿಕೊಂಡು ಹೊರಬರಲು ಹರಸಾಹಸ ಪಡುತ್ತಿತ್ತು. ಇದನ್ನು ಗಮನಿಸಿದ ಸ್ಥಳದಲ್ಲೇ ಕೆಲಸದಲ್ಲಿ ನಿರತರಾಗಿದ್ದ ಮೆಸ್ಕಾಂ ಸಿಬ್ಬಂದಿ ಮಂಜುನಾಥ್ ಡಿ ಮತ್ತು ಅವರ ಸಹೋದ್ಯೋಗಿಗಳು ಹಾವನ್ನು ರಕ್ಷಿಸಲು ಮುಂದಾದರು.
ಬಲೆಯಲ್ಲಿ ಸಿಲುಕಿಕೊಂಡಿದ್ದ ಹೆಬ್ಬಾವನ್ನು ಕಟರ್ ಸಹಾಯದಿಂದ ಬಲೆಯನ್ನು ಕತ್ತರಿಸಿ ಹಾವನ್ನು ಬೇರ್ಪಡಿಸಿ ಗೋಣಿ ಚೀಲದಲ್ಲಿ ಹಾಕಿ ಬಳಿಕ ಸಮೀಪದ ಕಾಡಿಗೆ ಸುರಕ್ಷಿತವಾಗಿ ಬಿಡಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೆಸ್ಕಾಂ ಸಿಬ್ಬಂದಿಯ ಮಾನವೀಯತೆ ಮತ್ತು ಧೈರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
