ಬಹುಕೋಟಿ ವಂಚನೆ ಪ್ರಕರಣ: ಆರೋಪಿ ರೋಶನ್ ಸಲ್ಡಾನ ವಿರುದ್ಧ ಇನ್ನಿಬ್ಬರಿಂದ ದೂರು ರೋಶನ್ ಸಲ್ಡಾನ
ಮಂಗಳೂರು : ಹಲವರಿಗೆ ಕೋಟ್ಯಂತರ ಹಣ ವಂಚಿದ ಆರೋಪಿ ಕಂಕನಾಡಿ ಬೊಳ್ಳಗುಡ್ಡೆ ನಿವಾಸಿ ರೋಶನ್ ಸಲ್ದಾನ (43) ಎಂಬಾತನಿಂದ ವಂಚನೆಗೊಳಗಾದ ಮಹಾರಾಷ್ಟ್ರ ಮತ್ತು ಅಸ್ಸಾಂನ ಇಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಾರಾಷ್ಟ್ರದ ಉದ್ಯಮಿಯೊಬ್ಬರು 5 ಕೋಟಿ ರೂ. ಹಣವನ್ನು ಜು.16ರಂದು ಮತ್ತು ಅಸ್ಸಾಂ ರಾಜ್ಯದ ವ್ಯಕ್ತಿಯೊಬ್ಬರು 20 ಲಕ್ಷ ರೂ. ಹಣವನ್ನು ಜು.17 ಬ್ಯಾಂಕ್ ಮೂಲಕ ಆರೋಪಿಯ ಖಾತೆಗೆ ವರ್ಗಾಯಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ವಿರುದ್ಧ ಇವರು ನೀಡಿದ ದೂರಿನಂತೆ ಇನ್ನೊಂದು ಎಫ್ಐಆರ್ ದಾಖಲಾಗಿದೆ.
ಮಹಾರಾಷ್ಟ್ರದ ಉದ್ಯಮಿ ಮತ್ತು ಅಸ್ಸಾಂನ ವ್ಯಕ್ತಿ ಹಣ ವರ್ಗಾಯಿಸಿರುವುದನ್ನು ಪೊಲೀಸರು ಬ್ಯಾಂಕ್ಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಯ ಹೆಚ್ಚಿನ ವಿಚಾರಣೆಗೆ ಸೋಮವಾರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ನಡೆಸಲಾದ ಮಹತ್ವದ ಕಾರ್ಯಾಚರಣೆಯಲ್ಲಿ ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ 200ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ ಆರೋಪದಲ್ಲಿ ರೋಹನ್ ಸಲ್ಡಾನನನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.
ಈತ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾ ಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ. ಈ ರೀತಿಯಾಗಿ ಆರೋಪಿ ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿರು ವುದು ಪತ್ತೆಯಾಗಿದೆ. ಕಳೆದ ಅನೇಕ ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಮನೆಯಿಂದ ಪೊಲೀಸರು 667 ಗ್ರಾಂ ಚಿನ್ನಾಭರಣ, 2.75 ಕೋಟಿ ರೂ. ಮೌಲ್ಯದ ವಜ್ರದ ಆಭರಣ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,72,947 ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ, ಮಹತ್ವದ ದಾಖಲೆಗಳು ಮತ್ತು ಖಾಲಿ ಚೆಕ್ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.