ಬಾವಿಗೆ ಬಿದ್ದ ಒಂದೂವರೆ ವರ್ಷದ ಮಗು; ಜೀವ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ಯುವಕರು
ಕೊಣಾಜೆ: ಬೆಳ್ಮ ಸಮೀಪದ ಮಾರಿಯಮ್ಮಗೋಳಿ ಎಂಬಲ್ಲಿ ಮನೆಯಂಗಳದಲ್ಲಿ ಆಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಆಕಸ್ಮಿಕವಾಗಿ ಮನೆ ಸಮೀಪದ ಬಾವಿಗೆ ಬಿದ್ದ ಘಟನೆ ರವಿವಾರ ಸಂಜೆ ಸಂಭವಿಸಿದ್ದು, ಕೂಡಲೇ ಮಗುವಿನ ಚಿಕ್ಮಪ್ಪ ಹಾಗೂ ಸ್ಥಳೀಯ ಯುವಕ ಬಾವಿಗಿಳಿದು ಮಗುವಿನ ಪ್ರಾಣ ರಕ್ಷಣೆ ಮಾಡಿದ್ದಾರೆ.
ಗುರುಪ್ರಸಾದ್ ಎಂಬವರ ಮಗಳಾದ ಎರಡೂವರೆ ಹರೆಯದ ಹಿಮಾನಿಯನ್ನು ರಕ್ಷಿಸಲಾಗಿದೆ. ಮನೆಮಂದಿ ಅಂಗಳದಲ್ಲಿ ಕುಳಿತಿದ್ದ ಸಂದರ್ಭ ಅಂಗಳದಲ್ಲಿ ಆಟವಾಡುತ್ತಾ ಮಗು ಮನೆ ಆವರಣದಲ್ಲಿನ ತೆರೆದ ಬಾವಿಯೊಳಗೆ ಬಿದ್ದಿದೆ. 15 ಅಡಿ ಆಳದ ನೀರಿದ್ದ ಬಾವಿಯೊಳಗೆ ಬಿದ್ದ ಮಗುವನ್ನು ತಕ್ಷಣ ಚಿಕ್ಕಪ್ಪ ಜೀವನ್ ಎಂಬವರು ಹಗ್ಗ ಹಾಕಿ ರಕ್ಷಿಸಲು ಬಾವಿಗೆ ಇಳಿದಿದ್ದಾರೆ. ಆದರೆ ಈಜು ಬಾರದೇ ಇರುವುದರಿಂದ ಹಗ್ಗದ ಸಹಾಯದಲ್ಲಿ ನಿಂತು ಮಗುವಿನ ಕೈಯನ್ನು ಹಿಡಿದುಕೊಂಡು ಮೇಲೆ ಬರಲು ಸಾಧ್ಯವಾಗದೇ ಅಲ್ಲೇ ಉಳಿದಿದ್ದರು. ಅದಾಗಲೇ ಒಂದು ಬಾರಿ ನೀರಿನೊಳಗೆ ಹೋಗಿ ಮಗು ಮೇಲೆ ಬಂದಿತ್ತು.
ಭಾನುವಾರದ ದಿನವಾಗಿದ್ದರಿಂದಾಗಿ ಟೀಂ ಪೆಲತ್ತಡಿ ಫ್ರೆಂಡ್ಸ್ನ ಯುವಕರು ಆಟವಾಡಲು ಗದ್ದೆಗೆ ಹೋಗುವ ಸಂದರ್ಭ ಮಗು ಬಾವಿಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಮನೆಮಂದಿಯ ರೋಧನ ಕಂಡು ತಕ್ಷಣ ಸ್ಥಳಕ್ಕೆ ಧಾವಿಸಿದ ಯುವಕರ ಪೈಕಿ ವಿವೇಕ್ ಅವರು ಅದೇ ಹಗ್ಗದ ಮೂಲಕ ಕೆಳಗಿಳಿದು ಬಾವಿಯ ನೀರಿಗೆ ಧುಮುಕಿದ್ದಾರೆ. ಇವರಿಗೆ ಸ್ನೇಹಿತ ಧನಂಜಯ್ ಸೇರಿದಂತೆ ಸ್ಥಳೀಯ ಯುವಕರು ಹಗ್ಗವನ್ನು ಹಿಡಿಯುವುದರ ಜೊತೆಗೆ ಧೈರ್ಯ ತುಂಬಿದ್ದರು. ಬಳಿಕ ಮಗುವನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಮಗು ಬಾವಿಯಿಂದ ಹೊರ ತೆಗದ ನಂತರ ಆರೋಗ್ಯಯುತವಾಗಿತ್ತು. ಯುವಕರ ಮಾನವೀಯ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ. ವಿವೇಕ್ ಗಾರ್ಡನಿಂಗ್ ಸಂಸ್ಥೆಯಲ್ಲಿ ಸುಪರ್ ವೈಸರ್ ಆಗಿ ದುಡಿಯುತ್ತಿದ್ದಾರೆ.
