ಬೆಂಗಳೂರು: ಮಾಜಿ ಸಚಿವ ಚಿಂಚನಸೂರ್ ವಿರುದ್ಧ ವಂಚನೆ ಕೇಸ್ ದಾಖಲಿಸಿದ ಮಹಿಳೆ ಆತ್ಮಹತ್ಯೆ!
ಬೆಂಗಳೂರು: ಮಾಜಿ ಸಚಿವ, ಗುರುಮಿಟ್ಕಲ್ ಶಾಸಕ ಬಾಬುರಾವ್ ಚಿಂಚನಸೂರ್ ವಿರುದ್ಧ ಹಣ ವಂಚನೆ ಪ್ರಕರಣ ದಾಖಲಿಸಿದ ಮಹಿಳೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಡಿಕೊಂಡಿದ್ದಾರೆ.
ಬೆಂಗಳೂರಿನ ಚಂದ್ರಾ ಲೇಔಟ್ ನಿವಾಸಿ ಅಂಜನಾ ವಿ ಶಾಂತವೀರ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.”ತಾನು ಆರ್ಥಿಕ ಸಂಕಷ್ಟದಿಂದ ನೊಂದಿದ್ದೇನೆ” ಎಂದು ಕಾರಣ ನೀಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಬಾಬುರಾವ್ ಚಿಂಚನಸೂರ್ ಅಂಜನಾ ಅವರ ಬಳಿ 11.88 ಕೋಟಿ ರು. ಸಾಲ ಪಡೆದಿದ್ದರು.
ಆದರೆ ಸಾಲ ಹಿಂದಿರುಗಿಸದೆ ವಂಚಿಸಿದ್ದರೆಂದು ಆರೋಪಿಸಿ ಮಹಿಳೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಶಾಸಕರು ಚೆಕ್ ಬೌನ್ಸ್ ಪ್ರಕರಣದಲ್ಲಿ 15ನೇ ಎಸಿಎಂಎಂ ಕೋರ್ಟಿನಿಂದ ಜಾಮೀನು ಪಡೆದ ವಿಚಾರದಲ್ಲಿ ನೊಂದ ಅಂಜನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಂಚನಸೂರ್ ನೀಡಿದ ಚೆಕ್ ಬೌನ್ಸ್ ಆಗಿತ್ತು. ಸಚಿವರಾಗಿದ್ದ ಅವಧಿಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಅನುಮತಿ ಕೋರಿ ಮಹಿಳೆ ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ದೂರಿತ್ತಿದ್ದರು. ಆದರೆ ಸ್ಪೀಕರ್ ಮಹಿಳೆಗೆ ರಾಜ್ಯಪಾಲರ ಬಳಿ ತೆರಳಲು ಸೂಚಿಸಿದ್ದರೆಂದು ಮಾಹಿತಿ ಇದೆ.
ಬುಧವಾರ ಸಂಜೆ ಅಂಜನಾ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೋಲೀಸರು ಮಾಹಿತಿ ನೀಡಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಜವಳಿ ಸಚಿವರಾಗಿದ್ದ ಬಾಬುರಾವ್ ಚಿಂಚನಸೂರ್ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದ ಅಂಜನಾ .ತಮಗೆ ಮಾಜಿ ಸಚಿವರ ಕಡೆಯಿಂದ ಜೀವ ಬೆದರಿಕೆ ಇದೆ ಎಂದೂ ಆಕೆ ಅಂದಿನ ಪೋಲೀಸ್ ಆಯುಕ್ತರಾಗಿದ್ದ ಎಂಎಸ್ ರೆಡ್ಡಿ ಅವರಿಗೆ ದೂರಿನ ಮೂಲಕ ತಿಳಿಸಿದ್ದರು.
ಬುಧವಾರ ಸಾಯುವ ಮುನ್ನ ತನ್ನ ಮಗ ಸುಮಂತ್‌ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ ಅಂಜನಾ “ನನಗೆ ಆರ್ಥಿಕ ಸಂಕಟ ಎದುರಾಗಿದೆ, ನಾನೀಗ ಸಾಯುತ್ತಿದ್ದೇನೆ, ನಾನು ಸತ್ತ ನಂತರ ನೀನೇ ಬಂದು ನನ್ನ ಧಕ್ಕೆ ಬೆಂಕಿ ಇಡಬೇಕು” ಎಂದು ಹೇಲೀದ್ದಾರೆ. ಇದರಿಂದ ಆತಂಕಗೊಂಡ ಪುತ್ರ ಸುಮಂತ್ ಮನೆಗೆ ಬರುವಷ್ಟರಲ್ಲೇ ಅಂಜನಾ ನೇಣು ಬಿಗಿದು ಸಾವನ್ನಪ್ಪಿದ್ದಾರೆ. ಆರ್ಥಿಕ ತೊಂದರೆಯೇ ತನ್ನ ತಾಯಿಯ ಆತ್ಮಹತ್ಯೆಗೆ ಕಾರಣವೆಂದು ಸುಮಂತ್ ಚಂದ್ರಾಲೇಔಟ್ ಪೊಲೀಸರಿಗೆ ತಿಳಿಸಿದ್ದಾರೆ.