Home Mangalorean News Kannada News ಬೆಂಗಳೂರು: ವೈದ್ಯರನ್ನು ಹನಿಟ್ರ್ಯಾಪ್‌ಗೆ ಕೆಡವಿದ ಯುವತಿ ಸೇರಿ ಮೂವರ ಬಂಧನ

ಬೆಂಗಳೂರು: ವೈದ್ಯರನ್ನು ಹನಿಟ್ರ್ಯಾಪ್‌ಗೆ ಕೆಡವಿದ ಯುವತಿ ಸೇರಿ ಮೂವರ ಬಂಧನ

Spread the love

ಬೆಂಗಳೂರು: ವೈದ್ಯರನ್ನು ಹನಿಟ್ರ್ಯಾಪ್‌ಗೆ ಕೆಡವಿದ ಯುವತಿ ಸೇರಿ ಮೂವರ ಬಂಧನ

ಬೆಂಗಳೂರು: ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಗೆ ಕೆಡವಿದ ಓರ್ವ ಯುವತಿ ಸೇರಿ ಮೂವರು ಖತರ್‌ನಾಕ್‌ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಂಗಸಂದ್ರ, ಮೈಕೋ ಲೇಔಟ್‌ ನಿವಾಸಿ ಚಾಂದಿನಿ (22), ಲಾಲ್‌ಬಹದ್ದೂರ್ ಶಾಸ್ತ್ರಿನಗರ, ಅಂಜನಾಪುರ ನಿವಾಸಿ ಪ್ರಜ್ವಲ್ (26) ಹಾಗೂ ಸಿಂಗಸಂದ್ರ, ಜಿ.ಕೆ.ಲೇಔಟ್‌ನ ನಿವಾಸಿ ಅನಿರುದ್ಧ (23) ಬಂಧಿತ ಆರೋಪಿಗಳು.

ಚಾಂದಿನಿ ಹಾಗೂ ಅನಿರುದ್ಧ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಚಾಂದಿನಿ ಸಾಗರ ತಾಲೂಕಿನ ಕಾರ್ಗಲ್‌ ನ ಜಾಲಿಗದ್ದೆ ಗ್ರಾಮದ ಚಾನಲ್ ಹತ್ತಿರ ನಿವಾಸಿಯಾಗಿದ್ದರೆ, ಅನಿರುದ್ಧ ಕೂಡ ಸಾಗರದ ಜೋಗ ರಸ್ತೆಯ ಪಿಶ್ ಮಾರ್ಕೆಟ್‌ ಹತ್ತಿರದ ಕಾರ್ಗಲ್ ನಿವಾಸಿಯಾಗಿದ್ದಾನೆ.

ಘಟನೆಯ ಹಿನ್ನೆಲೆ:

ವೈದ್ಯರೊಬ್ಬರು ಜೂನ್ 14ರಂದು ಯಲಹಂಕ ಪೊಲೀಸ್ ಠಾಣೆಗೆ ಹಾಜರಾಗಿ ತಾವು ಮೋಸಹೋದ ಹನಿಟ್ರ್ಯಾಪ್‌ ಬಗ್ಗೆ ದೂರು ನೀಡಿದ್ದರು. ತಾವು ವೈದ್ಯನಾಗಿ ಕೆಲಸ ಮಾಡುತ್ತಿದ್ದು, ತಮಗೆ ಆನ್‌ಲೈನ್‌ನಲ್ಲಿ ಚಾಂದಿನಿ ಬಿ ಎಂಬವಳು ಪರಿಚಿತಳಾಗಿದ್ದು, ಇಬ್ಬರು ಸ್ನೇಹಿತರಾದೆವು. ಜೂನ್ 13ರಂದು ಏರ್‌ ಪೋರ್ಟ್ ರಸ್ತೆಯ ಹೋಟೆಲ್‌ ಒಂದರಲ್ಲಿ ಊಟ ಮಾಡಿಕೊಂಡು ರಾತ್ರಿ ಸುಮಾರು 11 ಗಂಟೆಗೆ ನಾನು ಮತ್ತು ಚಾಂದಿನಿ ನಮ್ಮದೇ ಆದ ಯಲಹಂಕ ಪ್ರಕೃತಿ ನಗರದ ಬಾಡಿಗೆ ಮನೆಗೆ ಬಂದೆವು.

ನಾವಿಬ್ಬರೂ ಮನೆಯ ಒಳಗಡೆ ಹೋದಾಗ ಏಕಾಏಕಿ ಇಬ್ಬರು ಆಸಾಮಿಗಳು ನಮ್ಮ ಮನೆಯ ಒಳಗೆ ಅತಿಕ್ರಮಣ ಪ್ರವೇಶ ಮಾಡಿ ನಾವು ಟಿವಿಯವರು ಹಾಗೂ ಇಂಟಿಲಿಜೆಂಟ್ಸ್ ಪೊಲೀಸರು ಎಂದು ಹೇಳಿದರು. ನೀವಿಬ್ಬರು ಒಟ್ಟಿಗೆ ಇರುವ ಖಾಸಗಿ ದೃಶ್ಯಗಳು ನಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದೇವೆ ಎಂದು ಹೇಳಿ ನಮಗೆ 10 ಲಕ್ಷ ರೂ. ಹಣ ಕೊಡದಿದ್ದರೆ ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತೇವೆ ಎಂದು ಬೆದರಿಕೆ ಹಾಕಿದರು ಎಂದು ವೈದ್ಯರು ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ಚಾಂದಿನಿ ಸಹ ಅವರ ಜತೆ ಸೇರಿಕೊಂಡು, ಇವರು ನಮ್ಮ ಕಡೆಯವರು ನೀನು ಹಣ ಕೊಡದಿದ್ದರೆ ನಿನ್ನನ್ನು ಸಾಯಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿದರು. ಈ ವೇಳೆ ನನ್ನ ಬಳಿ ಇದ್ದ 5000 ರೂ. ಹಣವನ್ನು ನನ್ನಿಂದ ಬಲವಂತವಾಗಿ ಕಸಿದುಕೊಂಡರು. ನಂತರ ಚಾಂದಿನಿ, ನಾನು ನಾಳೆ ಕರೆ ಮಾಡುತ್ತೇನೆ, ಉಳಿದ ಹಣವನ್ನು ನಾವು ಹೇಳಿದ ಸ್ಥಳಕ್ಕೆ ತಂದು ಕೊಡಬೇಕು, ಇಲ್ಲದಿದ್ದರೆ ಈ ದೃಶ್ಯಗಳನ್ನು ಇಂಟರ್‌ ನೆಟ್‌ನಲ್ಲಿ ಹಾಕುವುದಲ್ಲದೆ ನಿನ್ನ ವಿರುದ್ಧ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು ಎಂದು ವೈದ್ಯರು ದೂರಿನಲ್ಲಿ ತಿಳಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ನಗರ ಈಶಾನ್ಯ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಚಾಂದಿನಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಮುರುಗನ್, ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್, ಯಹಲಂಕ ಉಪ ವಿಭಾಗದ ಎಸಿಪಿ ಎಂ.ಎಸ್. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಯಹಲಂಕ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಂ.ಬಿ.ರಾಮಕೃಷ್ಣ ರೆಡ್ಡಿ ಅವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ಗಂಗರುದ್ರಯ್ಯ, ಸುಭಾಷ್ ಚಂದ್ರಪಟ್ಟಣ, ಶಿವಕುಮಾರ್ ಬದ್ನೂರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.


Spread the love

Exit mobile version