ಬೆಳ್ತಂಗಡಿ: ಜಾತಿ ನಿಂದನೆ ಮಾಡಿ ಯುವಕನಿಗೆ ಕೊಲೆ ಬೆದರಿಕೆ; ಇಬ್ಬರ ಬಂಧನ
ಬೆಳ್ತಂಗಡಿ: ಶಿಬಾಜೆಯಲ್ಲಿ ಯುವಕನಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಪ್ರಕರಣದ ಆರೋಪಿಗಳಿಬ್ಬರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಶಿಬಾಜೆ ನಿವಾಸಿಗಳಾಗಿರುವ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಎಂಬವರು ಬಂಧಿತ ಆರೋಪಿಗಳು.
ಮೇ 15ರಂದು ಶಿಬಾಜೆಯ ಕುರುಂಜ ಮನೆಯ ಎದುರು ನಿಂತಿದ್ದ ವೇಳೆ ಸ್ಥಳೀಯ ನಿವಾಸಿ ಪ್ರವೀಣ್ ಎಂಬಾತನ ಮೇಲೆ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಹಲ್ಲೆಗೆ ಯತ್ನಿಸಿದ್ದರು. ಆನಂದ ಗೌಡ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡು ಹಾಗೂ ತಿಮ್ಮಪ್ಪ ಪೂಜಾರಿ ಕಬ್ಬಿಣದ ಸಲಾಕೆಯನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಲು ಬಂದಿದ್ದು, ಈ ವೇಳೆ ಪ್ರವೀಣ್ ತಪ್ಪಿಸಿಕೊಂಡು ಮನೆಯೊಳಗೆ ಹೋಗಿ ಬಾಗಿಲು ಹಾಕಿದ್ದಾನೆ. ಈ ವೇಳೆ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಪ್ರವೀಣ್ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಮೇ22 ರಂದು ಬಂಧಿಸಿದ್ದಾರೆ.