ಬೈಂದೂರು ಪಟ್ಟಣ ಪಂಚಾಯತ್ ವಿಚಾರ: ಜನರ ಅಭಿಪ್ರಾಯವೇ ನಿರ್ಧಾರಾತ್ಮಕ – ಶಾಸಕ ಗುರುರಾಜ್ ಗಂಟಿಹೊಳೆ
ಉಡುಪಿ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮಾಂತರ ಪ್ರದೇಶಗಳನ್ನು ಸೇರಿಸುವ ವಿಚಾರದಲ್ಲಿ ಜನರ ಅಭಿಪ್ರಾಯವೇ ನಿರ್ಧಾರಾತ್ಮಕ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.
ಪಟ್ಟಣ ಪಂಚಾಯತ್ ವಿರುದ್ಧ ಜನರು ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಗ್ರಾಮೀಣ ಪ್ರದೇಶದ ಜನರ ನೋವಿಗೆ ಸ್ಪಂದಿಸುವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
“ಪಟ್ಟಣ ಪಂಚಾಯತ್ ಬೇಕೋ ಬೇಡವೋ, ಯಾವ ಗ್ರಾಮಗಳನ್ನು ಸೇರಿಸಬೇಕು ಅಥವಾ ಕೈ ಬಿಡಬೇಕು ಎಂಬ ಚರ್ಚೆಗಳು ಪ್ರಕ್ರಿಯೆಯ ಭಾಗವಾಗಿವೆ. ಎಲ್ಲಾ ಚರ್ಚೆಗಳು ಕಾರ್ಯಕರ್ತರು, ಶಾಸಕರು ಹಾಗೂ ಅಧಿಕಾರಿಗಳ ಜೊತೆ ನಡೆಯುತ್ತಿವೆ. ಅಂತಿಮವಾಗಿ ತೀರ್ಮಾನ ಜನರ ಪರವಾಗಿರಬೇಕು,” ಎಂದು ಶಾಸಕರು ಹೇಳಿದರು.
ಬೈಂದೂರು ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಶಕ್ತಿ ಪ್ರಬಲವಾಗಿದ್ದು, ಅವರ ಅಭಿಪ್ರಾಯಕ್ಕೆ ತಕ್ಕಂತೆ ನಿರ್ಧಾರಗಳು ಆಗುತ್ತವೆ. ಕಾಂಗ್ರೆಸ್ ಹಸ್ತಕ್ಷೇಪದ ಆರೋಪವನ್ನು ಅವರು ತಳ್ಳಿಹಾಕಿ, “ಬೈಂದೂರಿನಲ್ಲಿ ಕಾಂಗ್ರೆಸ್ ಕೈ ಆಡಿಸುವ ಪ್ರಶ್ನೆಯೇ ಇಲ್ಲ. ಇಲ್ಲಿ ಬಿಜೆಪಿ ಕಾರ್ಯಕರ್ತರೇ ಮುಖ್ಯ ಶಕ್ತಿ,” ಎಂದು ಸ್ಪಷ್ಟಪಡಿಸಿದರು.