ಬೈಕ್- ಟಾಟಾ ಏಸ್ ನಡುವೆ ಅಪಘಾತ: ಬೈಕ್ ಸವಾರ ಮೃತ್ಯು, ಸಹ ಸವಾರ ಗಂಭೀರ
ಕುಂದಾಪುರ: ಬೈಕ್ ಹಾಗೂ ಟಾಟಾ ಏಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಖಂಬದಕೋಣೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರನನ್ನು ಉಪ್ಪುಂದ ಶಾಲೆಬಾಗಿಲು ಸಮೀಪದ ಫಿಶರೀಸ್ ಕಾಲನಿ ನಿವಾಸಿ ಪರಮೇಶ್ವರ ಖಾರ್ವಿ ಎಂಬುವರ ಪುತ್ರ ಭುವನ್ (19) ಎಂದು ಗುರುತಿಸಲಾಗಿದೆ. ಅಲ್ಲಿಯ ನಿವಾಸಿ ಗಿರಿಜಾ ಖಾರ್ವಿ ಅವರ ಪುತ್ರ ಮಧು (20) ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಭುವನ್ ಹಾಗೂ ಮಧು ಅವರು ಬೈಕಿನಲ್ಲಿ ಕುದಾಪುರ ಕಡೆಯಿಂದ ಉಪ್ಪುಂದಕ್ಕೆ ಬರುತ್ತಿದ್ದರು. ಬೈಕ್ ಖಂಬದಕೋಣೆ ಸಮೀಪಿಸುತ್ತಿದ್ದಂತೆಯೇ ಟಾಟಾ ಏಸ್ ವಾಹನವೊಂದು ಹೆದ್ದಾರಿಯಲ್ಲಿ ಹಠಾತ್ತನೆ ಯೂ ಟರ್ನ್ ತೆಗೆದುಕೊಂಡ ವೇಳೆ ಈ ಅವಘಡ ಸಂಭವಿಸಿದೆ.
ಟಾಟಾ ಏಸ್ ಗೆ ಢಿಕ್ಕಿ ಹೊಡೆದ ಬೈಕ್ ನಿಯಂತ್ರಣ ತಪ್ಪಿ ರಸ್ತೆಗಪ್ಪಳಿಸಿದ ಪರಿಣಾಮ ಬೈಕ್ ಸವಾರ ಭುವನ್ ತಲೆಗೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವದೊಂದಿಗೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ಮಧು ಅವರನ್ನು ತಲೆ, ಎದೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
