Home Mangalorean News Kannada News ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ವಿಶ್ವ ಮಹಿಳಾ ದಿನಾಚರಣೆ

ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ವಿಶ್ವ ಮಹಿಳಾ ದಿನಾಚರಣೆ

Spread the love

ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ವಿಶ್ವ ಮಹಿಳಾ ದಿನಾಚರಣೆ

ಮಂಗಳೂರು: ವರ್ಷದಲ್ಲಿ ಒಂದು ದಿನ ಮಾತ್ರ ಮಹಿಳೆಯರದಲ್ಲ, ಎಲ್ಲ 365 ದಿನವೂ ಮಹಿಳೆಯರದ್ದೇ ಆಗಿದೆ. ಮಹಿಳೆಯರಿಲ್ಲದೆ ಯಾವುದೇ ಮನೆ, ಸಮಾಜ, ದೇಶ ನಡೆಯಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮ್ಮದ್ ಹೇಳಿದರು.

ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ.
ಬ್ಯಾರಿ ಸಮುದಾಯದಲ್ಲಿ ಹೆಣ್ಮಕ್ಕಳು ಶಿಕ್ಷಣ, ಸಾಹಿತ್ಯ ಮತ್ತಿತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಬ್ಯಾರಿ ಸಾಹಿತ್ಯ, ಸಂಸ್ಕೃತಿ ಉಳಿಸಿಕೊಂಡು ಬರುತ್ತಿದ್ದು, ಅವರಿಂದ ಮಾತ್ರ ಭಾಷೆಯ ಭವಿಷ್ಯ ನಿರೀಕ್ಷಿಸಬಹುದು ಎಂದು ಅವರು ಹೇಳಿದರು.

ಬ್ಯಾರಿಗಳು ಅನುಸರಿಸುವ ಧರ್ಮವು ಮಹಿಳೆಯರಿಗೆ ಕೊಟ್ಟಷ್ಟು ಸ್ಥಾನ, ಪಾಲು, ಗೌರವ ಬೇರೆ ಸಮಾಜದಲ್ಲಿ ನೋಡಲು ಸಾಧ್ಯವಿಲ್ಲ. ಇಲ್ಲಿ ತಂದೆಯ ಆಸ್ತಿಯಲ್ಲಿ ಪಾಲು ಇದೆ, ಹೆಣ್ಣಿನ ಅಧಿಕೃತ ಅನುಮತಿ ಇಲ್ಲದೆ‌ ವಿವಾಹವೂ ನಡೆಯುವುದಿಲ್ಲ. ಪತಿ ಸರಿ ಇಲ್ಲದಿದ್ದರೆ ಆತನನ್ನು‌ ಬಿಡುವ‌, ಮರು ಮದುವೆ ಆಗುವ ಅಧಿಕಾರವೂ ಇದೆ ಎಂದು ಕರಂಬಾರ್ ಹೇಳಿದರು.

ವಿಚಾರಗೋಷ್ಠಿ: ಈ ಸಂದರ್ಭದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅಫ್ಶಾನ್ ಅಧ್ಯಕ್ಷತೆ ವಹಿಸಿದ್ದರು.
ಪಿ.ಎ.ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಝೊಹರಾ ಅಬ್ಬಾಸ್ ಅವರು ‘ಪೆಣ್ಣ್‌ಗುಂ ಉಂಡು ಹಕ್ಕ್’ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದರು. ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕಿ ಡಾ.ಸೀತಾಲಕ್ಷ್ಮಿ ಕರ್ಕಿಕೋಡಿ, ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯೆ ಫಾತಿಮಾ ನಸೀಮಾ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ್ತಿ ಮುಮ್ತಾಝ್ ಪಕ್ಕಲಡ್ಕ ಪ್ರತಿಕ್ರಿಯೆ ನೀಡಿದರು.

ಸಾಧಕರಿಗೆ ಸನ್ಮಾನ:
ಈ ಸಂದರ್ಭದಲ್ಲಿ ಸಾಧಕರಾದ ಸಾಹಿತಿ ಝುಲೇಕಾ ಮುಮ್ತಾಝ್ ಮತ್ತು ಆರೋಗ್ಯ ನಿರೀಕ್ಷಕಿ ಆಯಿಷಾ ಪೆರ್ನೆ ಅವರನ್ನು ಸನ್ಮಾನಿಸಲಾಯಿತು.

ಕವಿಗೋಷ್ಠಿ: ಬಳಿಕ ನಡೆದ ಕವಿಗೋಷ್ಠಿಯಲ್ಲಿ ಮಿಸ್ರಿಯಾ ಪಜೀರ್ ಅಧ್ಯಕ್ಷತೆ ವಹಿಸಿದ್ದರು. ಸಲ್ಮಾ(ಬ್ಯಾರಿ), ಝುಲೇಖ ಮಮ್ತಾಝ್ (ಬ್ಯಾರಿ), ಶಿಫಾ ಕೆ.ಎಂ. (ಕನ್ನಡ), ಫೆಲ್ಸಿ ಲೋಬೊ (ಕೊಂಕಣಿ), ಸುಮಯ್ಯ ಬಾನು (ಬ್ಯಾರಿ), ಮಂಜುಳಾ (ತುಳು), ಸಾಜಿದಾ ಮೂಮಿನ್ (ಉರ್ದು) ಕವಿಗಳಾಗಿ ಭಾಗವಹಿಸಿದ್ದರು. ಮರ್ಯಮ್ ಇಸ್ಮಾಯಿಲ್ ಕವಿಗೋಷ್ಠಿ ನಿರೂಪಣೆ ಮಾಡಿದರು.

ಬಹುಮಾನ ವಿತರಣೆ:
ಬ್ಯಾರಿ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಬ್ಯಾರಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮುಫೀದಾ, ಆಯಿಷತ್ ಸಫ್ವಾನಾ ಯು., ಮಾಸಿತಾ, ನುಸೈಬಾ ಬಾನು, ತಸ್ರಿಯಾ, ನಿಸ್ಮಾ, ಕಥಾ ಸ್ಪರ್ಧೆ ವಿಜೇತರಾದ ಆಯಿಷತ್ ಸಫ್ವಾನಾ ಯು., ಆರಿಫಾ ಜಿ.ಎಂ., ಹಫೀಝಾ ಫಾತಿಮಾ ಅವರಿಗೆ ಬಹುಮಾನ ವಿತರಣೆ ನಡೆಯಿತು.

ಅಕಾಡೆಮಿ ಸದಸ್ಯೆ ಆಯಿಶಾ ಯು.ಕೆ. ಸ್ವಾಗತಿಸಿದರು. ಹಿರಾ ಪಿಯು ಕಾಲೇಜಿನ ಉಪನ್ಯಾಸಕಿ ರುಕ್ಸಾನ ಯು. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Spread the love

Exit mobile version