ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಅಕ್ರಮ ಮರ ಕಡಿದ ಆರೋಪ: ತನಿಖೆ ಹಾಗೂ ಅಧಿಕಾರಿಗಳ ಅಮಾನತಿಗೆ ಎನ್ ಎಸ್ ಯು ಐ ಆಗ್ರಹ
ಬ್ರಹ್ಮಾವರ: ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮರ ಕಡಿತ ಹಾಗೂ ಮರ ಸಾಗಣೆ ಯತ್ನದ ಗಂಭೀರ ಪ್ರಕರಣವನ್ನು ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು ಎಂದು ಉಡುಪಿ ಜಿಲ್ಲಾ ಎನ್ ಎಸ್ ಯು ಐ ಸರಕಾರವನ್ನು ಆಗ್ರಹಿಸಿ ಕೇಂದ್ರದ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾರಂ ಸೂಪರಿಂಟೆಂಡೆಂಟ್ ಶಂಕರ್ ಹಾಗೂ ADR ಅವರು ತಮ್ಮ ಅಧಿಕಾರದ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಇದು ಅತ್ಯಂತ ಗಂಭೀರ ವಿಚಾರವಾಗಿದೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಆಸ್ತಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ಈ ದುಸ್ಕೃತ್ಯ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಾನ್ಯ ಕೃಷಿ ಸಚಿವರು ಹಾಗೂ ಮಾನ್ಯ ಉಪಕುಲಪತಿಗಳು ಈ ವಿಷಯವನ್ನು ಅತ್ಯಂತ ತುರ್ತಾಗಿ ಪರಿಗಣಿಸಿ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ಪೂರ್ಣಗೊಳ್ಳುವವರೆಗೆ ಶಂಕಿತ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಸರ್ಕಾರಿ ಆಸ್ತಿಯನ್ನು ರಕ್ಷಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಹೋದರೆ ಸಾರ್ವಜನಿಕರ ವಿಶ್ವಾಸಕ್ಕೆ ಭಂಗ ಉಂಟಾಗಲಿದೆ ಎಂದು ಹೇಳಲಾಗಿದೆ. ಸತ್ಯ ಹೊರಬರಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಖಚಿತವಾಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಎನ್ ಎಸ್ ಯು ಐ ರಾಜ್ಯ ಕಾರ್ಯದರ್ಶಿ ಸೈಯ್ಯದ್ ಫುರ್ಕಾನ್ ಯಾಸಿನ್, ಕುಂದಾಪುರ ತಾಲೂಕು ಅಧ್ಯಕ್ಷ ಶೋಜನ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಂತ್ ಶೆಟ್ಟಿ, ಸೈಯ್ಯದ್ ಅದ್ನಾನ್, ಮೊಹಮ್ಮದ್ ಅವಾಫ್, ಸುಮುಖ್ ಶೇರಿಗಾರ್, ಆದರ್ಶ್ ಶೇರಿಗಾರ್, ಮೊಹಮ್ಮದ್ ಸಮ್ಮಿ ಉಪಸ್ಥಿತರಿದ್ದರು.