ಬ್ರಹ್ಮಾವರ ಯುವತಿ ಅಕ್ಷತಾ ಪೂಜಾರಿ ಮೇಲಿನ ಹಲ್ಲೆ ಖಂಡನೀಯ: ದಿನೇಶ್ ಮೆಂಡನ್
ಉಡುಪಿ: ಬ್ರಹ್ಮಾವರದ ಯುವತಿ ಅಕ್ಷತಾ ಪೂಜಾರಿ ಅವರ ಮೇಲೆ ನಡೆದಿರುವ ಹಲ್ಲೆ ಖಂಡನೀಯವಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಅಕ್ಷತಾ ಪೂಜಾರಿ ಅವರ ಮೇಲೆ ಹಲ್ಲೆ ನಡೆಸಿ, ನಂತರ ಅದೇ ಯುವತಿಯ ಮೇಲೆಯೇ ಕರ್ತವ್ಯ ಲೋಪದ ಆರೋಪದಡಿ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕಾದ ಪೊಲೀಸರೇ ಈ ರೀತಿಯಲ್ಲಿ ವರ್ತಿಸಿರುವುದು ಇಲಾಖೆಯ ಮೇಲಿನ ಜನರ ನಂಬಿಕೆಗೆ ಧಕ್ಕೆ ತರುವಂತಾಗಿದೆ ಎಂದು ದಿನೇಶ್ ಮೆಂಡನ್ ಹೇಳಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದ್ದು, ತಕ್ಷಣವೇ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಸ್ತಕ್ಷೇಪ ಮಾಡಿ ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆ ಪಾರದರ್ಶಕತೆ ಮತ್ತು ನ್ಯಾಯದ ತತ್ವಗಳನ್ನು ಪಾಲಿಸಬೇಕೆಂದು ಒತ್ತಾಯಿಸಿದ ಅವರು, ಸಂತ್ರಸ್ತ ಯುವತಿಗೆ ನ್ಯಾಯ ದೊರಕಿಸುವಂತೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
