ಭವಿಷ್ಯವನ್ನು ರೂಪಿಸುವ ತಾಂತ್ರಿಕ ಶಿಕ್ಷಣದ ಅವಶ್ಯಕತೆ ಇದೆ: ಫ್ರಾನ್ಸಿಸ್ ಕರ್ನೆಲಿಯೋ
- ನಾಡ ಐಟಿಐ ಸಂಸ್ಥೆಯಲ್ಲಿ ಘಟಿಕೋತ್ಸವ
ಕುಂದಾಪುರ: ಆಧುನಿಕ ಜಗತ್ತಿನಲ್ಲಿ ಭವಿಷ್ಯವನ್ನು ಕಟ್ಟಿಕೊಳ್ಳುವ ವೃತ್ತಿಪರತೆಯನ್ನು ಹೊಂದಲು ತಾಂತ್ರಿಕ ಶಿಕ್ಷಣದ ಆಯ್ಕೆ ಒಳ್ಳೆಯ ಮಾರ್ಗ ಎಂದು ಪಡುಕೋಣೆ ಇಗರ್ಜಿಯ ಧರ್ಮಗುರುಗಳಾದ ಫ್ರಾನ್ಸಿಸ್ ಕರ್ನೆಲಿಯೋ ಅಭಿಪ್ರಾಯ ಪಟ್ಟರು.
ನಾಡದ ರೇ.ಫಾ.ರೋಬರ್ಟ್ ಜ್ಹಡ್ ಎಂ ಡಿಸೋಜ ಐಟಿಐ ಸಂಸ್ಥೆಯಲ್ಲಿ ನಡೆದ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿದ ಅವರು ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಸರ್ಕಾರಿ, ಖಾಸಗಿ ಹಾಗೂ ಸ್ವಉದ್ಯೋಗಕ್ಕೆ ಅತ್ಯಂತ ಉಪಯುಕ್ತವಾಗಿರುವ ಐಟಿಐ ಶಿಕ್ಷಣ ಸಂಸ್ಥೆಗಳು ಬಡವರ ಇಂಜಿನಿಯರಿಂಗ್ ಕಾಲೇಜುಗಳಿದ್ದಂತೆ. ಕೇವಲ 1-2 ವರ್ಷಗಳ ಒಳಗೆ ಕಡಿಮೆ ವೆಚ್ಚದಲ್ಲಿ ವೃತ್ತಿಯ ನೈಪುಣ್ಯ ಹೇಳಿಕೊಡುವ ಈ ಶಿಕ್ಷಣ ಪದ್ದತಿಯಲ್ಲಿ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳ ಕೆಲಸವಿಲ್ಲ ಎಂದು ಮನೆಯಲ್ಲಿ ಕುಳಿತಿರುವ ಉದಾಹರಣೆಗಳು ಅತ್ಯಂತ ವಿರಳ ಎಂದರು.
ಪ್ರಾಕ್ತನ ವಿದ್ಯಾರ್ಥಿ, ಕುಂದಾಪುರದ ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಗಣೇಶ್ ದೇವಾಡಿಗ ಅವರು, ಐಟಿಐ ಶಿಕ್ಷಣ ಪಡೆದುಕೊಂಡಿರುವ ತರಬೇತುದಾರರಿಗೆ ದೇಶ ಹಾಗೂ ವಿದೇಶದಲ್ಲಿ ವಿಫುಲ ಅವಕಾಶಗಳಿವೆ. ಐಟಿಐ ಶಿಕ್ಷಣ ಪಡೆದುಕೊಂಡವರಿಗೂ ಒಳ್ಳೆಯ ವೇತನ ಹಾಗೂ ಸೌಲಭ್ಯ ದೊರಕುತ್ತಿದೆ. ಎಸ್ಎಸ್ಎಲ್ಸಿ/ಪಿಯುಸಿಯಲ್ಲಿ ಕಡಿಮೆ ಅಂಕ ಬಂದು ಇಂಜಿನಿಯರಿಂಗ್ ಶಿಕ್ಷಣ ವಂಚಿತರಾದೆವಲ್ಲ ಎನ್ನುವ ವಿದ್ಯಾರ್ಥಿಗಳೂ ಐಟಿಐ ಶಿಕ್ಷಣ ಪಡೆದುಕೊಂಡು ಇಂಜಿನಿಯರಿಂಗ್ ಪದವಿ ಪೂರೈಸಿರುವ ಸಾಕಷ್ಟು ಉದಾಹರಣೆಗಳು ಇದೆ ಎಂದರು.
ಆಡಳಿತ ಮಂಡಳಿ ಕಾರ್ಯದರ್ಶಿ ನವೀನ್ ಲೋಬೊ ಅವರು, ಗ್ರಾಮೀಣ ಭಾಗದಲ್ಲಿ ಸ್ಥಾಪನೆಗೊಂಡಿರುವ ಈ ಸಂಸ್ಥೆಯಿಂದ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದುಕೊಂಡ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉತ್ತಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಸಂಸ್ಥೆಯ ಯಶಸ್ಸಿನ ಹಿಂದೆ ದಿ.ಆಲ್ಫೋನ್ಸ್ ಲೋಬೊ ಸೇರಿದಂತೆ ಹಲವಾರು ಮಂದಿಯ ಶ್ರಮವಿದೆ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಮನೋಹರ್ ಆರ್ ಕಾಮತ್, ಪ್ಲೇಸ್ಮೆಂಟ್ ಅಧಿಕಾರಿ ರಾಜೇಶ್ ಕೆ.ಸಿ ಇದ್ದರು.
ವಿದ್ಯಾರ್ಥಿ ಅರ್ಜುನ್ ಶೆಟ್ಟಿ ಅನಿಸಿಕೆ ಹಂಚಿಕೊಂಡರು. ವಿನಾಯಕ ಕಾಮತ್ ನಾಯ್ಕನ್ಕಟ್ಟೆ ಪ್ರಾರ್ಥಿಸಿದರು, ಕಿರಿಯ ತರಬೇತಿ ಅಧಿಕಾರಿಗಳಾದ ರಾಘವೇಂದ್ರ ಆಚಾರ್ ಸ್ವಾಗತಿಸಿದರು, ದಿನೇಶ್ ಕೆ ಬೈಂದೂರು ವಂದಿಸಿದರು, ಕಿಶೋರ್ ಪೂಜಾರಿ ಸಸಿಹಿತ್ಲು ನಿರೂಪಿಸಿದರು.