ಮಂಗಳೂರು: ಅಗತ್ಯ ವಸ್ತುಗಳ ಖರೀದಿಗೆ ಸಮಯದ ಮಿತಿ – ದಕ ಜಿಲ್ಲಾಡಳಿತದ ನಿರ್ಧಾರ ಗೊಂದಲಮಯ : ಅಕ್ಷಿತ್ ಸುವರ್ಣ

Spread the love

ಮಂಗಳೂರು: ಅಗತ್ಯ ವಸ್ತುಗಳ ಖರೀದಿಗೆ ಸಮಯದ ಮಿತಿ – ದಕ ಜಿಲ್ಲಾಡಳಿತದ ನಿರ್ಧಾರ ಗೊಂದಲಮಯ : ಅಕ್ಷಿತ್ ಸುವರ್ಣ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮೇ 7ರಿಂದ ಬೆಳಗ್ಗೆ 6ರಿಂದ 9ರೊಳಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿರುವ ಜಿಲ್ಲಾಡಳಿತದ ನಿರ್ಧಾರ ಸಂಪೂರ್ಣ ಗೊಂದಲಮಯವಾಗಿದೆ. ಜಿಲ್ಲಾಡಳಿತದ ಈ ದೀಡೀರ್ ನಿರ್ಧಾರದಿಂದಾಗಿ ಜನ ಸಾಮಾನ್ಯರು ಸಮಸ್ಯೆ ಅನುಭವಿಸುವಂತೆ ಮಾಡಿದ್ದಾರೆ ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಈ ಮೊದಲು ರಾಜ್ಯ ಸರಕಾರ ಹೊರಡಿಸಿದ್ದ ಕಾನೂನನ್ನು ಬದಿಗೊತ್ತಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಜಿಲ್ಲೆಯ ಜನತೆಗೆ ಯಾವುದೇ ರೀತಿಯ ಮುಂಚಿತ ಮಾಹಿತಿ ನೀಡದೆ ಏಕಾಏಕಿಯಾಗಿ ಹೊಸ ನಿಯಮವನ್ನು ಜಾರಿಗೆಗೊಳಿಸಿದ್ದಾರೆ. ಇಂತಹ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಆಡಳಿತ ಪಕ್ಷದ ನಾಯಕರನ್ನು ಮಾತ್ರ ಕರೆದು ವಿರೋಧ ಪಕ್ಷವನ್ನು ದೂರವಿಟ್ಟಿರುವುದು ಸರಿಯಲ್ಲ. ಅಲ್ಲದೆ ದಿನಸಿ ಅಂಗಡಿಗಳಿಗೆ, ತರಕಾರಿ ಮಾರಾಟಕ್ಕೆ ಸರಕಾರ ಮಧ್ಯಾಹ್ನ 12 ರ ತನಕ ಅವಕಾಶ ನೀಡಿದ್ದು ಅದನ್ನು ಬದಲಿಸಿ ಕೇವಲ 9 ಗಂಟೆಗೆ ಸೀಮಿತಿಗೊಳಿಸಿರುವುದು ಈಗಾಗಲೇ ಕೊರೋನಾದಿಂದ ವ್ಯಾಪಾರವಿಲ್ಲದೆ ತತ್ತಿರಿಸಿರುವ ವ್ಯಾಪಾರಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ನಡುವೆ ಪೊಲೀಸರು ಕೂಡ ಹೊಸ ನಿಯಮದ ಹೆಸರಿನಲ್ಲಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು ಇದರಿಂದ ಸಾಮಾನ್ಯ ವ್ಯಾಪಾರಸ್ಥರು ಕೂಡ ತೊಂದರೆ ಅನುವಭಿಸುವಂತಾಗಿದೆ. ಹೊಸ ನಿಯಮದ ಪ್ರಕಾರ ದಿನ ಬಳಕೆ ವಸ್ತುಗಳನ್ನು ಖರೀದಿಸಿಲು ಬೆಳಿಗ್ಗೆ 9 ಗಂಟೆಯ ವರೆಗೆ ಅವಕಾಶ ನೀಡಿದ್ದು ಕಟ್ಟಡ ಕಾಮಗಾರಿ ನಡೆಯಲು ಅವಕಾಶ ಮಾಡಿಕೊಡಲಾಗಿದ್ದು ಆದರೆ ಹೊರಗಿನ ಪ್ರದೇಶಗಳಿಂದ ಕಾರ್ಮಿಕರನ್ನು ಕರೆತರಲು ಅವಕಾಶವಿಲ್ಲ ಎಂಬ ಕಾನೂನಿನಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಅಲ್ಲದೆ ಕಟ್ಟಡ ಕಾಮಗಾರಿಯ ವಾಹನವನ್ನು ಪೊಲೀಸರು ತಡೆಯುತ್ತಿದ್ದು ಇದರಿಂದ ಕೂಡ ಕಾಮಗಾರಿಗೆ ಅಡ್ಡಿಯುಂಟಾಗುತ್ತಿದೆ ಆದ್ದರಿಂದ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಆಗ್ರಹಿಸಿದ್ದಾರೆ


Spread the love

1 Comment

Comments are closed.