Home Mangalorean News Kannada News ಮಂಗಳೂರು| ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ, ದಂಡ

ಮಂಗಳೂರು| ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ, ದಂಡ

Spread the love

ಮಂಗಳೂರು| ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ, ದಂಡ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಬೆಳ್ತಂಗಡಿಯ ಶಂಕರ ಗೌಡ (60) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ- 1(ಪೊಕ್ಸೊ) ನ್ಯಾಯಾಲಯವು ಮಂಗಳವಾರ 8 ವರ್ಷದ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

2025ರ ಮಾರ್ಚ್‌ನಲ್ಲಿ ಶಂಕರಗೌಡ ತನಗೆ ಪರಿಚಯವಿದ್ದ ಬಾಲಕಿಯ ಮನೆಗೆ ತೆರಳಿ ಅಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ 1(ಪೊಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಮೋಹನ ಜೆ.ಎಸ್. ಆರೋಪಿಗೆ ಒಟ್ಟು 8 ವರ್ಷಗಳ ಶಿಕ್ಷೆ ವಿಧಿಸಿದ್ದಾರೆ.

ಬಿಎನ್‌ಎಸ್ ಕಲಂ 74ರಡಿ 3 ವರ್ಷದ ಕಠಿಣ ಶಿಕ್ಷೆ ಮತ್ತು 20,000 ರೂ.ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಶಿಕ್ಷೆ, ಬಿಎನ್‌ಎಸ್ ಕಲಂ 75 (2)ರಡಿ 2 ವರ್ಷ ಕಠಿಣ ಶಿಕ್ಷೆ ಮತ್ತು 15,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳು ಸಾದಾ ಸಜೆ, ಪೊಕ್ಸೊ ಕಾಯ್ದೆಯ ಕಲಂ 8 ರಡಿ 3 ವರ್ಷ ಕಠಿಣ ಶಿಕ್ಷೆ ಮತ್ತು 20,000 ರೂ.ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಶಿಕ್ಷೆ ವಿಧಿಸಿದ್ದಾರೆ. ಈ ಶಿಕ್ಷೆಗಳನ್ನು ಜತೆಯಾಗಿ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.

*2 ಲ.ರೂ ಪರಿಹಾರ: ದಂಡದ ಮೊತ್ತದಲ್ಲಿ 50,000 ರೂ. ಅಲ್ಲದೆ 1.50 ಲ.ರೂ ಹೆಚ್ಚುವರಿ ಪರಿಹಾರವನ್ನು ಸಂತ್ರಸ್ತೆ ಬಾಲಕಿಗೆ ನೀಡಬೇಕು ಎಂದು ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಧರ್ಮಸ್ಥಳ ಠಾಣಾಧಿಕಾರಿಯಾಗಿದ್ದ ಸಮರ್ಥ್ ರವೀಂದ್ರ ಗಾಣಿಗೇರ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪೊಕ್ಸೊ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.


Spread the love

Exit mobile version