ಮಂಗಳೂರು | ಕುಸಿದುಬಿದ್ದ ಆವರಣ ಗೋಡೆ: ಹಲವು ದ್ವಿಚಕ್ರ ವಾಹನಗಳು ಜಖಂ
ಮಂಗಳೂರು: ನಗರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಅಲ್ಲಲ್ಲಿ ಅವಾಂತರಗಳನ್ನು ಸೃಷ್ಟಿಸಿದೆ. ಕಳೆದ ರಾತ್ರಿ ಮತ್ತು ಇಂದು ಬೆಳಗ್ಗೆ ಸುರಿದ ಭಾರೀ ಮಳೆಗೆ ಮೇರಿಹಿಲ್ ಬಳಿ ಆವರಣ ಗೋಡೆ ಕುಸಿದು ಬಿದ್ದಿದೆ. ಈ ವೇಳೆ ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಕೊಟ್ಟಾರ ಚೌಕಿಯಲ್ಲಿ ಹಲವು ಅಂಗಡಿಗಳಿಗೆ ನೆರೆ ನೀರು ನುಗ್ಗಿದೆ. ಸರ್ಕ್ಯೂಟ್ ಹೌಸ್ – ಬಿಜೈ ಬಳಿ ತಡರಾತ್ರಿ ಗುಡ್ಡ ಕುಸಿದು ರಸ್ತೆಗೆ ಬಿದ್ದು ಸಂಚಾರ ವ್ಯವಸ್ಥೆಗೆ ತೊಂದರೆ ಆಗಿದೆ. ನಗರದಲ್ಲಿ ಮಳೆ ಮುಂದುವರಿದಿದೆ.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಬುಧವಾರ ರಾತ್ರಿ ಬಿಜೈ ಬಟ್ಟಗುಡ್ಡ, ಆರ್ಯಸಮಾಜ ರಸ್ತೆ, ಪಂಪ್ ವೆಲ್, ಮಾಲೆಮಾರ್, ಕಾವೂರು ಉಲ್ಲಾಸ ನಗರ, ಕೊಟ್ಟಾರ ಚೌಕಿ ಸೇರಿದಂತೆ ಮಳೆ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.