ಮಂಗಳೂರು: ಕೋಪಗೊಂಡು ಕೈಯಿಂದ ಶೋಕೇಸ್ ನ ಗಾಜು ಒಡೆದ ವಿವಾಹಿತ; ತೀವ್ರ ರಕ್ತಸ್ರಾವದಿಂದ ಮೃತ್ಯು
ಉಳ್ಳಾಲ: ಕೋಪಗೊಂಡು ಮನೆಯ ಶೋಕೇಸ್ ನ ಗಾಜು ಕೈಯ್ಯಲ್ಲೇ ಒಡೆದ ಪರಿಣಾಮ ಕೈಯ ನರಕ್ಕೆ ಗಾಯವಾಗಿ ವಿವಾಹಿತನೋರ್ವ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ಮಾಡೂರು ಸೈಟ್ ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಮಾಡೂರ್ ಸೈಟ್ ನಿವಾಸಿ ಸತೀಶ್ ನಾಯಕ್ ರವರ ಪುತ್ರ ನಿತೇಶ್ ನಾಯಕ್(38) ಮೃತಪಟ್ಟವರು. ನಿತೇಶ್ ಹಾಗೂ ಸಹೋದರ ಇಬ್ಬರೂ ತಿಂಡಿ ಲೈನ್ ಸೇಲ್ ನಡೆಸುತ್ತಿದ್ದರು.
ಗುರುವಾರ ಕರ್ತವ್ಯ ಮುಗಿಸಿ ಮನೆಗೆ ವಾಪಾಸ್ಸಾದ ಬಳಿಕ ಕೋಟೆಕಾರು ಬೀರಿ ಜಂಕ್ಷನ್ ಸಮೀಪ ತಂದೆ ಮತ್ತು ಸಹೋದರನ ಜೊತೆಗೆ ಗಲಾಟೆ ಮಾಡಿ ಬಂದಿದ್ದ ನಿತೇಶ್, ಮನೆಯಲ್ಲಿಯೂ ನಿತ್ಯದಂತೆ ಗಲಾಟೆ ನಡೆಸಿದ್ದರು ಎನ್ನಲಾಗಿದೆ.
ಈ ವೇಳೆ ಕೋಪದಿಂದ ಮನೆಯ ಶೋಕೇಸ್ ನ ಗಾಜನ್ನು ಒಡೆದಿದ್ದು , ಈ ವೇಳೆ ಕೈಯ ನರಕ್ಕೆ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ತಿಳಿದುಬಂದಿದೆ.
ಮೃತರ ತಾಯಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.