ಮಂಗಳೂರು | ಡಿ.3ರಂದು ನಾರಾಯಣ ಗುರು, ಗಾಂಧಿ ಸಂವಾದ ಶತಮಾನೋತ್ಸವ : ಬಿ.ಕೆ.ಹರಿಪ್ರಸಾದ್
ಮಂಗಳೂರು: ವರ್ಕಲ ಶಿವಗಿರಿ ಮಠ, ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿಯವರ ಐತಿಹಾಸಿಕ ಸಂವಾದ ಶತಮಾನೋತ್ಸವ ಡಿ.3ರಂದು ನಡೆಯಲಿದೆ ಎಂದು ಕಾರ್ಯಕ್ರಮದ ಕೇಂದ್ರ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಡಿ.3ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಯಾಗಿರುವ ಶ್ರೀನಾರಾಯಣಗುರು ಪೀಠದ ಒಂದು ಭಾಗದ ಉದ್ಘಾಟನೆ ನಡೆಯಲಿದೆ. ಇದೇ ವೇಳೆ ಇನ್ನೊಂದು ಭಾಗದ ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಕಾರ್ಯ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಮಧ್ಯಾಹ್ನದ ಬಳಿಕ ಬ್ರಹ್ಮಶ್ರೀ ನಾರಾಯಣಗುರು ಮತ್ತು ಮಹಾತ್ಮಗಾಂಧಿ ಕುರಿತು ಐತಿಹಾಸಿಕ ಸಂವಾದ ಶತಮಾನೋತ್ಸವ ನಡೆಯಲಿದೆ. ಮಂಗಳೂರು ವಿವಿ ಕ್ಯಾಂಪಸ್ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿದೆ. ಪಕ್ಷಾತೀತ ಕಾರ್ಯಕ್ರಮ ಇದಾಗಿದ್ದು, ಸುಮಾರು 15 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಶಿವಗಿರಿ ಮಠದ ಸ್ವಾಮೀಜಿ ಸಚ್ಚಿದಾನಂದ, ಕೆ.ಸಿ.ವೇಣುಗೋಪಾಲ್ ಸೇರಿದಂತೆ, ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ಸಚಿವರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ವೈಕಂ ಸತ್ಯಾಗ್ರಹದ ವೇಳೆ 1925ರ ಮಾರ್ಚ್ 9, 10ರ ಎರಡು ದಿನ ಗಾಂಧೀಜಿ ಕೇರಳದ ವೈಕಂನಲ್ಲಿ ಉಳಿದಿದ್ದರು. ಅಸಮಾನತೆ, ಅಸ್ಪಶ್ಯತೆ ತಾಂಡವವಾಡುತ್ತಿದ್ದ ಆ ಸಂದರ್ಭದಲ್ಲಿ ಹಿಂದೂಗಳು ಅನ್ಯ ಮತಕ್ಕೆ ಮತಾಂತರಗೊಳ್ಳುತ್ತಿದ್ದರು. ಅದನ್ನು ತಡೆಯಲು ನಾರಾಯಣಗುರುಗಳ ನೆರವನ್ನು ಪಡೆಯುವ ಬಗ್ಗೆ ಡಾ.ಪಲ್ಪುರಂತಹ ಸಾಮಾಜಿಕ ಸುಧಾರಕರು ಗಾಂಧೀಜಿಗೆ ತಿಳಿಸಿದಾಗ, ಗಾಂಧೀಜಿ ಶಿವಗಿರಿಗೆ ಪ್ರಯಾಣಿಸಿದ್ದರು. ಅಲ್ಲಿ ವನಜಾಕ್ಷಿ ಮಠದಲ್ಲಿ ನಾರಾಯಣಗುರು ಮತ್ತು ಗಾಂಧೀಜಿ ಸಮಾಗಮದ ವೇಳೆ ಸಹಸ್ರಾರು ಮಂದಿ ಜಮಾಯಿಸಿದ್ದರು. ಈ ಮೂಲಕ ಅವರಿಬ್ಬರ ಸಮಾಗಮದ ಪ್ರತೀಕವಾಗಿ ಐತಿಹಾಸಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಿ ಅದನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಈ ಮೂಲಕ ನಾರಾಯಣ ಗುರುಗಳ ಜಾತ್ಯತೀತ ತತ್ವ ಹಾಗೂ ಮಹಾತ್ಮ ಗಾಂಧಿಯವರ ಅಹಿಂಸೆಯ ಮೂಲಕ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಪ್ರಯತ್ನ ಇದಾಗಿದೆ ಎಂದವರು ಹೇಳದರು.
‘ಪವರ್ ಶೇರಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಸಂಬಂಧಪಟ್ಟವನಲ್ಲ. ಈ ಬಗ್ಗೆ ಕೆ.ಸಿ.ವೇಣುಗೋಪಾಲ್ ಅಥವಾ ಬೆಂಗಳೂರಿನಲ್ಲಿರುವ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕೇಳಬಹುದು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಡಿ. 3ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಹಾಗಾಗಿ ಈ ಊಹಾಪೋಹಗಳು ಬೇಡ’ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
‘ಮತ ಕಳ್ಳತನ’ ಅಭಿಯಾನದ ಭಾಗವಾಗಿ ರಾಮ್ ಲೀಲಾ ಮೈದಾನದಲ್ಲಿ ಡಿ.14ರಂದು ಕಾರ್ಯಕ್ರಮ ನಡೆಯಲಿದೆ. ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ಯಾವ ರೀತಿಯಲ್ಲಿ ತಪ್ಪು ದಾರಿಯಲ್ಲಿ ನಡೆದಿದೆ ಎಂಬ ಕುರಿತಂತೆ ಅಭಿಯಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಈಗಾಗಲೇ 1.4 ಕೋಟಿ ಸಹಿ ಸಂಗ್ರಹ ನಡೆದಿದ್ದು, ದೇಶದ ವಿವಿಧ ರಾಜ್ಯಗಳಿಂದ ಒಟ್ಟು 5 ಕೋಟಿ ಸಹಿ ಸಂಗ್ರಹವನ್ನು ಆ ದಿನ ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
