Home Mangalorean News Kannada News ಮಂಗಳೂರು: ತ್ಯಾಜ್ಯ ನಿರ್ವಹಣೆಗೆ ಜನಜಾಗೃತಿ ಮೂಡಿಸಲು ಕಾರವಾರದಿಂದ ಮಂಗಳೂರಿನವರೆಗೆ ಹಸಿರು ಪಾದಯಾತ್ರೆ

ಮಂಗಳೂರು: ತ್ಯಾಜ್ಯ ನಿರ್ವಹಣೆಗೆ ಜನಜಾಗೃತಿ ಮೂಡಿಸಲು ಕಾರವಾರದಿಂದ ಮಂಗಳೂರಿನವರೆಗೆ ಹಸಿರು ಪಾದಯಾತ್ರೆ

Spread the love

ಮಂಗಳೂರು: ತ್ಯಾಜ್ಯ ನಿರ್ವಹಣೆಗೆ ಜನಜಾಗೃತಿ ಮೂಡಿಸಲು ಕಾರವಾರದಿಂದ ಮಂಗಳೂರಿನವರೆಗೆ ಹಸಿರು ಪಾದಯಾತ್ರೆ

ಮಂಗಳೂರು: “ಹಸಿರು ನಡಿಗೆ – ಪ್ರತಿ ಹೆಜ್ಜೆ ಸ್ವಚ್ಛತೆಯೆಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾರವಾರದಿಂದ ಮಂಗಳೂರಿನವರೆಗೆ ಏಕಾಂಗಿಯಾಗಿ ಪಾದಯಾತ್ರೆ ನಡೆಸಿದ ಹಸಿರು ದಳದ ಪರಿಸರ ಪ್ರೇಮಿ ನಾಗರಾಜ್ ಬಜಾಲ್ ಇದೀಗ ಮಂಗಳೂರಿಗೆ ತಲುಪಿದ್ದಾರೆ.

ಉಳ್ಳಾಲ ನೇತ್ರಾವತಿ ಸೇತುವೆ ಮತ್ತು ಅಡ್ಯಾರ್ ಪ್ರದೇಶದಲ್ಲಿ “ಎಲ್ಲೆಂದರಲ್ಲಿ ಕಸ ಎಸೆಯಬೇಡಿ” ಎಂಬ ಫ್ಲೆಕ್ಸ್ ಕಾರ್ಡ್ ಹಿಡಿದು ಏಕಾಂಗಿಯಾಗಿ ನಿಂತು ಹಿಂದೆ ಗಮನ ಸೆಳೆದಿದ್ದ ನಾಗರಾಜ್ ಬಜಾಲ್, ಇದೀಗ ನಿಜವಾದ ಹಸಿರು ಸಂದೇಶದ ನಡಿಗೆಯ ಮೂಲಕ ಮತ್ತೊಮ್ಮೆ ಸಾರ್ವಜನಿಕರ ಮನ ಗೆದ್ದಿದ್ದಾರೆ.

ಅಕ್ಟೋಬರ್ 27ರಂದು ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರಿಂದ ಪಾದಯಾತ್ರೆಗೆ ಚಾಲನೆ ದೊರೆತಿದ್ದು, ಏಳು ದಿನಗಳ ಕಾಲ ನಡೆದ ಈ ಯಾತ್ರೆ ನವೆಂಬರ್ 2ರಂದು ಮಂಗಳೂರಿನಲ್ಲಿ ಅಂತ್ಯಗೊಂಡಿತು. ಈ ಅವಧಿಯಲ್ಲಿ ನಾಗರಾಜ್ ಸುಮಾರು 300 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಪೂರೈಸಿದ್ದಾರೆ.

ಪ್ರತಿ ದಿನ ಬೆಳಗ್ಗೆ 4ರಿಂದ 11ರವರೆಗೆ “ಕಸ ಎಸೆಯದಿರಿ” ಎಂಬ ಫ್ಲೆಕ್ಸ್ ಕಾರ್ಡ್ ಹಿಡಿದು ಪಾದಯಾತ್ರೆ ನಡೆಸಿದ ಅವರು, ನಂತರ ಶಾಲೆ, ಕಾಲೇಜು, ಪಂಚಾಯತ್ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಭೇಟಿ ನೀಡಿ ಘನ ತ್ಯಾಜ್ಯ ವಿಲೇವಾರಿ, ಕಸ ವಿಂಗಡಣೆ, ಪ್ಲಾಸ್ಟಿಕ್ ನಿಷೇಧ, ಮರುಬಳಕೆ ಮತ್ತು ಸಾರ್ವಜನಿಕ ಸಹಭಾಗಿತ್ವ ಕುರಿತು ಚರ್ಚೆ ನಡೆಸಿದರು. ಸಂಜೆ 4ರಿಂದ ರಾತ್ರಿ 10ರವರೆಗೆ ಪಾದಯಾತ್ರೆಯನ್ನು ಮುಂದುವರಿಸಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ನಾಗರಾಜ್ ಅವರು ಅಂಕೋಲ, ಕುಮಟಾ, ಇಡಗುಂಜಿ, ಭಟ್ಕಳ, ಕೋಟೇಶ್ವರ, ಪಡುಬಿದ್ರೆ ಪ್ರದೇಶಗಳಲ್ಲಿ ವಾಸ್ತವ್ಯವಿದ್ದು, ಕೆಲವೆಡೆ ಸಂಘ-ಸಂಸ್ಥೆಗಳು ವಾಸ್ತವ್ಯ ವ್ಯವಸ್ಥೆ ಮಾಡಿದ್ದು, ಉಳಿದಡೆ ಸ್ವಂತ ಖರ್ಚಿನಲ್ಲಿ ಹೊಟೇಲ್‌ಗಳಲ್ಲಿ ವಾಸ್ತವ್ಯ ಮಾಡಿದ್ದಾರೆ. ಮಂಗಳೂರಿನಲ್ಲಿ ಕುಟುಂಬ ಸದಸ್ಯರು ಹಾಗೂ ಸಹೋದ್ಯೋಗಿಗಳು ಅವರಿಗೆ ಸೇರಿಕೊಂಡು ಅಂತಿಮ ಹೆಜ್ಜೆಗಳಲ್ಲಿ ಜೊತೆ ನಡೆದರು.

ಯಾತ್ರೆಯ ಸಂದರ್ಭ ಒಂದು ಮನಮಿಡಿಯುವ ಘಟನೆ ನಡೆದಿದ್ದು — ಕುಮಟಾ ಬಳಿ ಒಂದು ಹೆಣ್ಣು ಶ್ವಾನವನ್ನು ನಾಯಿಗಳ ಗುಂಪಿನಿಂದ ರಕ್ಷಿಸಿದ ನಾಗರಾಜ್, ಆ ಶ್ವಾನ “ಚಾರ್ಲಿ” ಎಂಬ ಹೆಸರಿನಲ್ಲಿ ಇಡಗುಂಜಿವರೆಗೆ ಸುಮಾರು 45 ಕಿ.ಮೀ. ಹಿಂಬಾಲಿಸಿತು. ಆದರೆ, ಮರುದಿನ ಅದು ಕಾಣೆಯಾಗಿದ್ದು, ಅದನ್ನು ನೆನೆದು ನಾಗರಾಜ್ ಬೇಸರ ವ್ಯಕ್ತಪಡಿಸಿದರು.

ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಅಗತ್ಯತೆ ಕುರಿತು ನಾಗರಾಜ್ ಬಜಾಲ್ ಅವರ ಈ ಪಾದಯಾತ್ರೆ ಸಾಮಾಜಿಕ ಜಾಗೃತಿಗೆ ಪ್ರೇರಣೆಯಾದದ್ದು. ಸಾರ್ವಜನಿಕರಲ್ಲಿ ಸ್ವಚ್ಛತೆ ಹಾಗೂ ಪರಿಸರ ಪ್ರೇಮವನ್ನು ಬೆಳೆಸುವ ಅವರ ಈ ಶ್ಲಾಘನೀಯ ಪ್ರಯತ್ನ ಪ್ರಶಂಸನೀಯವಾಗಿದೆ.


Spread the love

Exit mobile version