ಮಂಗಳೂರು ನಗರಕ್ಕೆ ನಿರಂತರ ಪೊರೈಕೆ ಮಾಡುವಷ್ಟು ನೀರು ತುಂಬೆ ಅಣೆಕಟ್ಟಿನಲ್ಲಿದೆ – ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯ ಕೃತಕ ಅಭಾವ ಸೃಷ್ಟಿಯಾಗಿದೆ. ನಿರಂತರ ನೀರು ಪೂರೈಕೆ ಮಾಡಲು ಸಾಕಾಗುವಷ್ಟು ನೀರು ತುಂಬೆ ಕಿಂಡಿ ಅಣೆಕಟ್ಟಿನಲ್ಲಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.
![]()
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರದಲ್ಲಿ ನೀರು ಪೂರೈಕೆಯನ್ನು ವಾರದ ಕೆಲವು ದಿನಗಳಲ್ಲಿ ಸಂಪೂರ್ಣ ಸ್ಥಗಿತಗೊಳಿಸುವುದರಿಂದ ( ಏರ್ ಲಾಕ್) ನಿರ್ವಾತ ಪ್ರದೇಶದಲ್ಲಿ ಗಾಳಿ ತುಂಬಿ ನೀರು ಪೂರೈಕೆಗೆ ಸಮಸ್ಯೆಯಾಗುತ್ತದೆ ಆಗಿ ನೀರು ಪೂರೈಕೆಯಲ್ಲಿ ಮತ್ತಷ್ಟು ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆ ಕಾರಣದಿಂದ ನಿರಂತರ ನೀರು ಪೂರೈಕೆ ಮಾಡುವುದು ಸರಿಯಾದ ಕ್ರಮ. ತುಂಬೆಯಲ್ಲಿ ಈ ಹಿಂದೆ ಕೇವಲ 4 ಮೀಟರ್ ನೀರು ಸಂಗ್ರಹದ ಸಾಮರ್ಥ್ಯ ಇತ್ತು. ಈಗ 7 ಮೀಟರ್ ಎತ್ತರದ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. 6 ಮೀಟರ್ ಎತ್ತರದವರೆಗೆ ನೀರು ಸಂಗ್ರಹಿಸಲು ಸಾಧ್ಯವಾಗುತ್ತದೆ. ಸದ್ಯ ಅಲ್ಲಿ 5.2 ಮೀಟರ್ ನೀರು ಸಂಗ್ರಹವಿದೆ. ಈ ಸಂದರ್ಭ ಮನಪಾ ವ್ಯಾಪ್ತಿಯ ಕೆಲವು ಎತ್ತರ ಪ್ರದೇಶಗಳನ್ನು ಹೊರತುಪಡಿಸಿ ಪ್ರತಿದಿನ ನೀರು ಪೂರೈಸಬಹುದಾಗಿದೆ. ಎತ್ತರ ಪ್ರದೇಶಕ್ಕೆ ತಾಂತ್ರಿಕ ಕಾರಣದಿಂದ ಪ್ರತೂ ಎರಡು ದಿನಗಳಿಗೆ ಒಂದು ಬಾರಿ ನೀರು ನೀಡಲು ಸಾಧ್ಯ. ಈ ಹಿಂದೆ ಇದಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದ ನೀರು ಸಂಗ್ರಹವಿದ್ದಾಗಲೂ ಜನರಿಗೆ ಕುಡಿಯುವ ನೀರನ್ನು ನೀಡಲಾಗುತ್ತಿತ್ತು ಎಂದು ಲೋಬೊ ವಿವರಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರು ಅಧಿಕಾರದಲ್ಲಿಲ್ಲ. ಕೇವಲ ಅಧಿಕಾರಿಗಳು ಬಿಟ್ಟರೆ ಶಾಸಕರು ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್ ಹಿಂದಿನ ಮನಪಾ ಸದಸ್ಯರನ್ನು ದೂರುವ ಬದಲು ಜನರಿಗೆ ನಿರಂತರ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಿ. ಅದು ಅವರ ಹೊಣೆಗಾರಿಕೆಯಾಗಿದೆ ಎಂದು ಜೆ.ಆರ್.ಲೋಬೊ ಒತ್ತಾಯಿಸಿದರು.