ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು: ನ್ಯಾಯಾಲಯದಿಂದ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಹುಪ್ರಕರಣಗಳ ಆರೋಪಿಯನ್ನು ಮಂಗಳೂರು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಮ್ಮರ್ ಫಾರುಖ್ (ತಂದೆ: ದಿ. ಮೊಹಮ್ಮದ್ ಶರೀಫ್), ಶ್ರೀನಿವಾಸ್ ಕೇಬಲ್ ಆಪರೇಟರ್ ಸಮೀಪ, ಚಕ್ರವರ್ತಿ ಮೈದಾನ, ಕೃಷ್ಣಾಪುರ, ಸುರತ್ಕಲ್, ಮಂಗಳೂರು ನಿವಾಸಿ ಎಂದು ಗುರುತಿಸಲಾಗಿದೆ.
ಆರೋಪಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 41/2019ರಲ್ಲಿ ಶಸ್ತ್ರಾಸ್ತ್ರ ಕಾಯ್ದೆ (Arms Act) ಕಲಂ 4, 25(1)(B)(b) ಹಾಗೂ ಭಾರತೀಯ ದಂಡ ಸಂಹಿತೆಯ 143, 147, 148, 115 ಮತ್ತು 120(ಬಿ) ಕಲಂಗಳಡಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಪಡೆದು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಈ ಹಿನ್ನೆಲೆಯಲ್ಲಿ ಮಂಗಳೂರಿನ 6ನೇ ಜೆಎಂಎಫ್ಸಿ ನ್ಯಾಯಾಲಯ ಆರೋಪಿಯ ವಿರುದ್ಧ ದಸ್ತಗಿರಿ ವಾರಂಟ್ ಹೊರಡಿಸಿತ್ತು. ವಿಳಾಸ ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯ ಸುಳಿವು ಪತ್ತೆಹಚ್ಚಿದ ಕಂಕನಾಡಿ ನಗರ ಠಾಣೆಯ ಎಎಸ್ಐ ಜಗದೀಶ್, ಹೆಡ್ ಕಾನ್ಸ್ಟೇಬಲ್ ಬಾಲರಾಜ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ರವಿಕುಮಾರ್ ಅವರ ತಂಡವು ಜುಲೈ 14ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಉಮ್ಮರ್ ಫಾರುಖ್ ವಿರುದ್ಧ ಮಂಗಳೂರು ನಗರ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ಮಾರಕಾಸ್ತ್ರ ಹೊಂದಿಕೆ, ಎನ್ಡಿಪಿಎಸ್ ಕಾಯ್ದೆ, ಗಲಭೆ, ಜೀವ ಬೆದರಿಕೆ ಸೇರಿದಂತೆ 10ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.
ಇವುಗಳಲ್ಲಿ ಕಾವೂರು, ಸುರತ್ಕಲ್, ಕಂಕನಾಡಿ ನಗರ, ಬರ್ಕೆ, ದಕ್ಷಿಣ ಪೊಲೀಸ್ ಠಾಣೆ, ಮಂಗಳೂರು ಗ್ರಾಮಾಂತರ, ಪಡುಬಿದ್ರೆ, ಕೆಟಿಪಿಎಸ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರಕರಣಗಳು ಸೇರಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
