ಮಂಗಳೂರು| ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ದಾಖಲು
ಮಂಗಳೂರು: ನಗರದ ಬಿಜೈ ಕಾಪಿಕಾಡ್ ಬಳಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಅವಧಿ ಮೀರಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಾರ್ ಮಾಲಕ, ಸಿಬ್ಬಂದಿ ಮತ್ತು ಗ್ರಾಹಕರ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲಕ, ಮ್ಯಾನೇಜರ್ ಪ್ರವೀಣ್, ಸಿಬ್ಬಂದಿ ಅನ್ವಿತ್, ಗ್ರಾಹಕರಾಗಿದ್ದ ಪ್ರೀತೇಶ್, ಪರೇಶ್ ಮತ್ತು ಇನ್ನೊಬ್ಬ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉರ್ವ ಠಾಣೆಯ ಎಸ್ಸೈ ಗುರಪ್ಪಕಾಂತಿ ಪೊಲೀಸ್ ಸಿಬ್ಬಂದಿಯ ಜತೆ ಸೆ.21ರಂದು ರಾತ್ರಿ 12:10ಕ್ಕೆ ಕರ್ತವ್ಯದಲ್ಲಿ ರುವಾಗ ಬಿಜೈ ಕಾಪಿಕಾಡ್ ಬಳಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದರ ಮುಖ್ಯದ್ವಾರ ಮುಚ್ಚಿದ್ದರೂ ಒಳಗಡೆ ಗ್ರಾಹಕರು ಇರುವುದನ್ನು ಕಂಡು ಪ್ರಶ್ನಿಸಿದ್ದಾರೆ. ಬಾಗಿಲು ತೆರೆಯುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಆದರೆ ಬಾಗಿಲು ತೆರೆದಿಲ್ಲ. ರಾತ್ರಿ 12:55ಕ್ಕೆ ಬಾರ್ ಮ್ಯಾನೇಜರ್ ಪ್ರವೀಣ್ ಕರೆ ಮಾಡಿದ ಬಳಿಕ ಒಳಗಡೆ ಇದ್ದ ಸಿಬಂದಿ ಅನ್ವಿತ್ ಎಂಬಾತ ಬಾಗಿಲು ತೆರೆದಿದ್ದಾನೆ. ಯಾಕೆ ಸಮಯಕ್ಕೆ ಸರಿಯಾಗಿ ಬಂದ್ ಮಾಡಿಲ್ಲ, ಒಳಗೆ ಗ್ರಾಹಕರು ಇದ್ದಾರಾ ಎಂದು ಪೊಲೀಸರು ಪ್ರಶ್ನಿಸಿದಾಗ ಅವರಿಗೆ ಮದ್ಯ ನೀಡಿ ಹಿಂಬದಿಯ ಬಾಗಿಲಿನಿಂದ ಕಳುಹಿಸಿರುವುದಾಗಿ ತಿಳಿಸಿದ್ದಾನೆ. ಹಿಂಬದಿಯಿಂದ ಹೊರಟ ಯುವಕರು ದ್ವಿಚಕ್ರ ವಾಹನದಲ್ಲಿ ತೆರಳಲು ಮುಂದಾದಾಗ ಎಸ್ಸೈ ಗುರಪ್ಪ ಕಾಂತಿ ಸಿಬ್ಬಂದಿ ಲೇಖನ್ ಬಳಿ ಯುವಕರನ್ನು ತಡೆದು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆವಾಗ ಯುವಕರು ಪೊಲೀಸರನ್ನು ಪ್ರಶ್ನಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ತಕ್ಷಣ ಗುರಪ್ಪಕಾಂತಿ ಮಧ್ಯಪ್ರವೇಶಿಸಿದಾಗ ಆರೋಪಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.