ಮಂಗಳೂರು: ಬೃಹತ್ ಪ್ರಮಾಣದ MDMA ಸಾಗಾಟ – ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ
ಮಂಗಳೂರು: ನಗರದಲ್ಲಿ ಬೃಹತ್ ಪ್ರಮಾಣದ MDMA ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ ಘಟನೆ ಏಪ್ರಿಲ್ 19ರಂದು ಜೆಪ್ಪಿನ ಮೊಗರು ಪ್ರದೇಶದಲ್ಲಿ ನಡೆದಿದೆ.
ಪೊಲೀಸರಿಗೆ ಬಂದ ಖಚಿತ ಮಾಹಿತಿಯಂತೆ ಕೆಎ 70 ಕೆ 3333 ನಂಬರಿನ ಬಜಾಜ್ ಫ್ರೀಡಂ ದ್ವಿಚಕ್ರ ವಾಹನದಲ್ಲಿ MDMA ಸಾಗಾಟ ಮಾಡುತ್ತಿದ್ದ ಆರೋಪಿಗಳಾದ ಪರ್ವೇಜ್ @ ದಾವೂದ್ ಪರ್ವೇಜ್ (40) ಮತ್ತು ನಜರತ್ ಅಲಿ (37) ಅವರನ್ನು ವಶಕ್ಕೆ ಪಡೆದು ಅವರಿಂದ ಒಟ್ಟು 465.8 ಗ್ರಾಂ ತೂಕದ ಸುಮಾರು ರೂ. 46.50 ಲಕ್ಷ ಮೌಲ್ಯದ MDMA ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಪರ್ವೇಜ್ ಮಂಗಳೂರಿನ ಯುವ ಸಮುದಾಯ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಿಲ್ಲೆಯ ಹೊರಗಿನಿಂದ ಮಾದಕ ವಸ್ತುಗಳನ್ನು ತಂದು ನಗರದಲ್ಲಿ ಮಾರಾಟ ಮತ್ತು ಸರಬರಾಜು ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಇದಲ್ಲದೆ, ಪರ್ವೇಜ್ ವಿರುದ್ಧ ಪಾಂಡೇಶ್ವರ, ವಾಮಂಜೂರು, ಬಂದರು ಪೊಲೀಸ್ ಠಾಣೆ ಸೇರಿದಂತೆ ಬೆಂಗಳೂರಿನ ಅಮೃತಹಳ್ಳಿ ಹಾಗೂ ಉಡುಪಿ ಸೆನ್ ಠಾಣೆಗಳಲ್ಲಿ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದು, ಆತ ರೂಢಿಗತ ಡ್ರಗ್ ಪೆಡ್ಲರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಜರತ್ ಅಲಿ ಈತನೊಂದಿಗೆ ಸಹಕರಿಸಿ ಡ್ರಗ್ ಪೆಡ್ಲಿಂಗ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎನ್ನಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
