ಮಂಗಳೂರು ಮನಪಾದ ತೆರಿಗೆ ಹೆಚ್ಚಳ ವಿರುದ್ಧ ಸಿಪಿಎಂ ಪ್ರತಿಭಟನೆ
ಮಂಗಳೂರು : ಒಂದೆಡೆ ಮಧ್ಯಮ ವರ್ಗದ ಹಾಗೂ ದುಡಿಯುವ ಜನರ ಮೇಲೆ ಆಸ್ತಿ ತೆರಿಗೆ ಹೆಚ್ಚಳದ ಮೂಲಕ ಆರ್ಥಿಕ ಹೊರೆ ಹೇರಲಾಗುತ್ತಿದೆ. ಮತ್ತೊಂದೆಡೆ ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿರುವ ಬಡ ಕುಟುಂಬಗಳಿಗೆ ನ್ಯಾಯ ಒದಗಿಸುವ ಬದಲು ಹೆಚ್ಚುವರಿ ಪಾವತಿಯ ಹೆಸರಿನಲ್ಲಿ ಮತ್ತಷ್ಟು ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಿಪಿಎಂ ಮಂಗಳೂರು ನಗರ ಸಮಿತಿಯ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮುಂದೆ ಸೋಮವಾರ ಪ್ರತಿಭಟನಾ ನಡೆಯಿತು.
ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ದೇಶದಲ್ಲಿ ಅನುಸರಿಸಲಾಗುತ್ತಿರುವ ನವ ಉದಾರೀಕರಣ ನೀತಿಗಳ ಪರಿಣಾಮವಾಗಿ ಸ್ಥಳೀಯ ಆಡಳಿತವು ಜನರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ಕೇವಲ ಆದಾಯ ಸಂಗ್ರಹಿಸುವ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂದರು.
ನಗರವನ್ನು ಕಟ್ಟಿದ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ನೌಕರರು ಮತ್ತು ಸಾಮಾನ್ಯ ಜನರ ಮೇಲೆ ತೆರಿಗೆ ಭಾರ ಹೆಚ್ಚಿಸಲಾಗುತ್ತಿದೆ. ಆದರೆ ದೊಡ್ಡ ಬಂಡವಾಳಶಾಹಿಗಳು ಮತ್ತು ರಿಯಲ್ ಎಸ್ಟೇಟ್ ಲಾಬಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ಕೆಲಸ ಮಾತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಯೋಗೀಶ್ ಜಪ್ಪಿನಮೊಗರು ಟೀಕಿಸಿದರು.
ಸಿಪಿಎಂ ದ.ಕ.ಜಿಲ್ಲಾ ಸಮಿತಿ ಸದಸ್ಯ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಆಸ್ತಿ ತೆರಿಗೆ ಹೆಚ್ಚಳವನ್ನು ಹಿಂಪಡೆಯಬೇಕು. ನಿವೇಶನ ರಹಿತರಿಗೆ ತಕ್ಷಣ ನಿವೇಶನ ಮತ್ತು ಹಕ್ಕುಪತ್ರ ನೀಡಬೇಕು. ಹೆಚ್ಚುವರಿ ಪಾವತಿ ಆದೇಶಗಳನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಮುಖಂಡರಾದ ಜಯಂತಿ ಬಿ.ಶೆಟ್ಟಿ, ಸಂತೋಷ್ ಬಜಾಲ್, ದಯಾನಂದ ಶೆಟ್ಟಿ, ಶ್ರೀನಾಥ್ ಕಾಟಿಪಳ್ಳ, ಪ್ರಮೀಳಾ ಶಕ್ತಿನಗರ ಮಾತನಾಡಿದರು.
ಪಕ್ಷದ ಮುಖಂಡರಾದ ಜಯಲಕ್ಷ್ಮಿ ಜಪ್ಪಿನಮೊಗರು, ದೀಪಕ್ ಬಜಾಲ್, ಲೋಕೇಶ್ ಎಂ, ಶಶಿಧರ್ ಶಕ್ತಿನಗರ, ಮನೋಜ್ ಉರ್ವಸ್ಟೋರ್, ನಾಗೇಶ್ ಬೋಳಾರ್, ಭಾರತಿ ಬೋಳಾರ್ , ರವಿಚಂದ್ರ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಜಗದೀಶ್ ಬಜಾಲ್, ಮಾಧುರಿ ಬೋಳಾರ, ಜಯಪ್ರಕಾಶ್, ರೋಹಿಣಿ ಶೆಟ್ಟಿ, ಬಿಲಾಲ್ ಬೆಂಗ್ರೆ, ನಾಸಿರ್ ಬೆಂಗ್ರೆ, ಗೀತಾ ನಾಯಕ್, ಯೋಗಿತಾ ಉಳ್ಳಾಲ್ ಮತ್ತಿತರರು ಪಾಲ್ಗೊಂಡಿದ್ದರು.
