ಮಂಗಳೂರು: ಲಾರಿ – ಸ್ಕೂಟರ್ ಢಿಕ್ಕಿ; ಸವಾರ ಮೇಲ್ ರೊಯ್ ಶಾನ್ ಡಿಸೋಜ ಮೃತ್ಯು
ಮಂಗಳೂರು: ನಗರದ ಬಲ್ಮಠದ ರಸ್ತೆ ಬದಿ ನಿಲ್ಲಿಸಲಾಗಿದ್ದ ಕಂಟೆನರ್ ಲಾರಿಯ ಹಿಂಬದಿಗೆ ಸ್ಕೂಟರೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತ ಸ್ಕೂಟರ್ ಸವಾರನನ್ನು ಮೇಲ್ ರೊಯ್ ಶಾನ್ ಡಿಸೋಜ (24) ಎಂದು ಗುರುತಿಸಲಾಗಿದೆ.
ಆ.7ರಂದು ಬೆಳಗ್ಗೆ ಶಾನ್ ಡಿಸೋಜ ತನ್ನ ಸ್ಕೂಟರ್‌ನಲ್ಲಿ ಬಲ್ಮಠ ಕಡೆಯಿಂದ ಹಂಪನಕಟ್ಟೆ ಕಡೆಗೆ ತೆರಳುತ್ತಿದ್ದಾಗ ಬಲ್ಮಠ ರಸ್ತೆಯಲ್ಲಿರುವ ಅರವಿಂದ ಶೋರೂಮ್ ಮುಂದಿನ ಮುಖ್ಯರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಂಟೇನರ್ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರ ಗಾಯಗೊಂಡಿದ್ದ ಶಾನ್ ಡಿಸೋಜರನ್ನು ಸಾರ್ವಜನಿಕರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಶಾನ್ ಡಿಸೋಜ ಮೃತಪಟ್ಟಿದ್ದಾರೆ.
ಈ ಬಗ್ಗೆ ಶಾನ್ ಡಿಸೋಜರ ತಂದೆ ಮ್ಯಾಥ್ಯು ಲೀವೋ ಡಿಸೋಜ ನೀಡಿದ ದೂರಿನಂತೆ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.