Home Mangalorean News Kannada News ಮಂಗಳೂರು| ವ್ಯಕ್ತಿಯ ಕೊಲೆಗೆ ಯತ್ನ ಆರೋಪ: ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿಯ ವಿರುದ್ಧ ಪ್ರಕರಣ ದಾಖಲು

ಮಂಗಳೂರು| ವ್ಯಕ್ತಿಯ ಕೊಲೆಗೆ ಯತ್ನ ಆರೋಪ: ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿಯ ವಿರುದ್ಧ ಪ್ರಕರಣ ದಾಖಲು

Spread the love

ಮಂಗಳೂರು| ವ್ಯಕ್ತಿಯ ಕೊಲೆಗೆ ಯತ್ನ ಆರೋಪ: ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿಯ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಬೈಕ್‌ಗೆ ಕಾರು ಢಿಕ್ಕಿ ಹೊಡೆಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿಯ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಸತೀಶ್ ಕುಮಾರ್ ಕೆ.ಎಂ ಎಂಬಾತ ತನ್ನ ಮನೆಯ ಮುಂದಿನ ಮನೆಯಲ್ಲಿ ವಾಸವಾಗಿದ್ದ ಮುರಳಿ ಪ್ರಸಾದ್‌ಗೆ ಸದಾಕಾಲ ತಂಟೆ ತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎನ್ನಲಾಗಿದೆ. 2023ರಲ್ಲಿ ಮುರಳಿ ಪ್ರಸಾದ್‌ನ ತಂದೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಸತೀಶ್ ಕುಮಾರ್ ವಿನಾ ಕಾರಣ ಬೈಕ್‌ನಲ್ಲಿ ಬಂದು ತಾಗಿಸಿಕೊಂಡು ಹೋಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಾ.13ರಂದು ಬೆಳಗ್ಗೆ 8:15ಕ್ಕೆ ಬಿಜೈ ಕಾಪಿಕಾಡ್‌ನ 6ನೇ ಮುಖ್ಯರಸ್ತೆಯಲ್ಲಿ ತಾನು ಬೈಕ್‌ನಲ್ಲಿ ಮನೆಯಿಂದ ಹೋಗುತ್ತಿರುವಾಗ ಆರೋಪಿ ಸತೀಶ್ ಕುಮಾರ್ ತನ್ನ ಕಾರಿನಲ್ಲಿ ಕಾದು ಕುಳಿತು ಉದ್ದೇಶಪೂರ್ವಕವಾಗಿ ತನ್ನನ್ನು ಕೊಲೆಮಾಡುವ ಉದ್ದೇಶದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೆ ನಡೆದುಕೊಂಡು ಹೋಗುತ್ತಿದ್ದ ಹೆಂಗಸಿಗೆ ಢಿಕ್ಕಿ ಹೊಡೆದ ಪರಿಣಾಮ ಆಕೆಗೆ ಗಾಯವಾಗಿದೆ. ತನಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮುರಳಿ ಪ್ರಸಾದ್ ದೂರು ನೀಡಿದ್ದಾರೆ.

ಅದರಂತೆ ಸತೀಶ್ ಕುಮಾರ್‌ನನ್ನು ಬಂಧಿಸಲಾಗಿದೆ. ಕಾರನ್ನು ವಶಪಡಿಸಲಾಗಿದೆ. ಕೊಲೆಯತ್ನ ಪ್ರಕರಣವು ಉರ್ವ ಠಾಣೆಯಲ್ಲಿ ಮತ್ತು ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿ ಮಹಿಳೆಗೆ ಢಿಕ್ಕಿ ಹೊಡೆದ ಪ್ರಕರಣವು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

Exit mobile version