ಮಂಗಳೂರು: ಸಂತ ಅಂತೋನಿ ಆಶ್ರಮದಲ್ಲಿ ವಾರ್ಷಿಕ ಮಹೋತ್ಸವದ ತ್ರಿದುಮ್ ಪ್ರಾರ್ಥನೆಗೆ ಚಾಲನೆ
ಮಂಗಳೂರು: ಜಗತ್ಪ್ರಸಿದ್ಧ ಪವಾಡ sಪುರುಷ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವದ ಪೂರ್ವಭಾವಿ ಮೂರು ದಿನಗಳ ತ್ರಿದುಮ್ ಪ್ರಾರ್ಥನಾ ವಿಧಿಗಳು ಜೂನ್ 10, 2026 ರ ಬುಧವಾರದಂದು ಜೆಪ್ಪು ಮತ್ತು ಮಿಲಾಗ್ರಿಸ್ನಲ್ಲಿ ಅತ್ಯಂತ ಭಕ್ತಿ-ಶ್ರದ್ಧೆಯಿಂದ ಆರಂಭಗೊಂಡವು. ಈ ಬಾರಿಯ ಮಹೋತ್ಸವವನ್ನು”ಪವಾಡ ಪುರುಷ ಸಂತ ಅಂತೋನಿಯವರ ಮಾದರಿಯಲ್ಲಿ ಕ್ರೈಸ್ತ ಕೇಂದ್ರಿತ ಕುಟುಂಬಗಳನ್ನು ನಿರ್ಮಿಸೋಣ”ಎಂಬ ಮುಖ್ಯ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು, ಜೂನ್ 13 ರ ಶನಿವಾರದಂದು ಪ್ರಧಾನ ವಾರ್ಷಿಕ ಹಬ್ಬ ಜರುಗಲಿದೆ.

ತ್ರಿದುಮ್ ಪ್ರಾರ್ಥನೆಯ ಮೊದಲ ದಿನದ ಧಾರ್ಮಿಕ ವಿಧಿಗಳು ಬೆಳಿಗ್ಗೆ 6:00 ಗಂಟೆಗೆ ಜೆಪ್ಪುವಿನ ಸಂತ ಅಂತೋನಿ ಆಶ್ರಮದ ಚಾಪೆಲ್ನಲ್ಲಿ ಸಂತ ಅಂತೋನಿ ಪುಣ್ಯಕ್ಷೇತ್ರಗಳ ನಿರ್ದೇಶಕರಾದ ವಂ. ಗುರು ಜೆ. ಬಿ. ಕ್ರಾಸ್ತಾ ಅವರ ನೇತೃತ್ವದ ದಿವ್ಯ ಬಲಿಪೂಜೆಯೊಂದಿಗೆ ಆರಂಭವಾದವು. ಅವರು ನೊವೆನಾ ಪ್ರಾರ್ಥನೆಯನ್ನು ನೆರವೇರಿಸಿ, ನೆರೆದಿದ್ದ ಭಕ್ತಾದಿಗಳಿಗೆ ಆಶೀರ್ವದಿಸಿದರು.
ಮಂಗಳೂರು ಧರ್ಮಕ್ಷೇತ್ರದ ಕಥೋಲಿಕ್ ಕ್ಯಾರಿಸ್ಮ್ಯಾಟಿಕ್ ಸಂಚಾಲನದ ಸಾರಥ್ಯದಲ್ಲಿ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಜೆಪ್ಪು ಆಶ್ರಮದಲ್ಲಿ ವಿಶೇಷ ಪ್ರಾರ್ಥನಾ ಕೂಟ ಜರುಗಿತು. ವಂ. ಗುರು ಕ್ಲಿಫರ್ಡ್ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ನಡೆದ ಈ ಕೂಟದಲ್ಲಿ ಬ್ರದರ್ ರೋನಿ ಮತ್ತು ಬ್ರದರ್ ಡಾಲ್ಫಿ ಲೋಬೋ ಆರಾಧನೆ ಮತ್ತು ಸ್ತುತಿ ಗೀತೆಗಳನ್ನು ಮುನ್ನಡೆಸಿದರು. ಮಂಗಳೂರು ಧರ್ಮಕ್ಷೇತ್ರದ ಬೈಬಲ್ ಕಮಿಷನ್ ಕಾರ್ಯದರ್ಶಿಗಳಾದ ವಂ. ಗುರು ವಿನ್ಸೆಂಟ್ ಸಿಕ್ವೇರಾ ಅವರು “ಬೈಬಲ್ನಲ್ಲಿನ ಕುಟುಂಬಗಳು” ಎಂಬ ವಿಷಯದ ಕುರಿತು ಆಧ್ಯಾತ್ಮಿಕ ಪ್ರವಚನ ನೀಡಿ, ಮಹೋತ್ಸವದ ಮುಖ್ಯ ಉದ್ದೇಶವನ್ನು ವಿವರಿಸಿದರು.
ನಂತರ ವಂ. ಗುರು ಕ್ಲಿಫರ್ಡ್ ಫೆರ್ನಾಂಡಿಸ್ ಅವರು ಮೊದಲ ದಿನದ ತ್ರಿದುಮ್ ಬಲಿಪೂಜೆಯನ್ನು ಅರ್ಪಿಸಿ, ಜವಾಬ್ದಾರಿಯುತ ಪಾಲನೆ ಮತ್ತು ಮೌಲ್ಯಾಧಾರಿತ ಸದೃಢ ಕ್ರೈಸ್ತ ಕುಟುಂಬಗಳ ನಿರ್ಮಾಣದ ಮಹತ್ವದ ಕುರಿತುಅರ್ಥಪೂರ್ಣ ಭಕ್ತಿಪ್ರವಚನ ನೀಡಿದರು.
ಬಲಿಪೂಜೆಯ ನಂತರ, ತೋಕೂರು ಚರ್ಚ್ನ ಧರ್ಮಗುರುಗಳಾದ ವಂ. ಗುರು ಅನಿಲ್ ಜೋಯಲ್ ಡಿಸೋಜ ಅವರ ನೇತೃತ್ವದಲ್ಲಿಪವಿತ್ರ ಪರಮ ಪ್ರಸಾದದ ಆರಾಧನೆ ಮತ್ತು ಆಶೀರ್ವಾದ ನೆರವೇರಿತು. ತದನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಸಂಜೆ 6:00 ಗಂಟೆಗೆ ಮಿಲಾಗ್ರಿಸ್ ದೇವಾಲಯದಲ್ಲಿ ವಂ. ಗುರು ಬೊನಿಫಾಸ್ ಪಿಂಟೊ ಅವರ ನೇತೃತ್ವದಲ್ಲಿ ಸಂಜೆಯ ದಿವ್ಯ ಬಲಿಪೂಜೆ ಹಾಗೂ ಭಕ್ತಿಪ್ರವಚನ ಜರುಗಿತು.
ಜೂನ್ 13 ರ ಶನಿವಾರದಂದು ನಡೆಯಲಿರುವ ಪ್ರಧಾನ ಮಹೋತ್ಸವದ ದಿನದ ಸಂಭ್ರಮದ ದಿವ್ಯ ಬಲಿಪೂಜೆಗಳ ವೇಳಾಪಟ್ಟಿ ಈ ಕೆಳಗಿನಂತಿದೆ:
• ಸಂತ ಅಂತೋನಿ ಆಶ್ರಮ, ಜೆಪ್ಪು:
o ಬೆಳಿಗ್ಗೆ 6:00 ಗಂಟೆಗೆ:ವಂ. ಗುರು ಪಾವ್ಲ್ ಮೆಲ್ವಿನ್ ಡಿಸೋಜ, ಕಾಪುಚಿನ್ ಇವರ ಪ್ರಧಾನ ಸಾನ್ನಿಧ್ಯದಲ್ಲಿ.
o ಬೆಳಿಗ್ಗೆ 10:30 ಗಂಟೆಗೆ:ಕರ್ನಾಟಕ ಪ್ರಾಂತ್ಯದ ಒ.ಸಿ.ಡಿ ಪ್ರಾಂತೀಯ ಮುಖ್ಯಸ್ಥರಾದ ಅತಿ ವಂದನೀಯ ಗುರು ಜಾನ್ ಸಿಕ್ವೇರಾ ಇವರ ಪ್ರಧಾನ ಸಾನ್ನಿಧ್ಯದಲ್ಲಿ.
• ಮಿಲಾಗ್ರಿಸ್ ದೇವಾಲಯ:
o ಬೆಳಿಗ್ಗೆ 8:00 ಗಂಟೆಗೆ:ರೊಸಾರಿಯೋ ಕೆಥೆಡ್ರಲ್ನ ರೆಕ್ಟರ್ ಆದ ಅತಿ ವಂದನೀಯ ಗುರು ವಾಲೆರಿಯನ್ ಡಿಸೋಜ ಇವರ ಪ್ರಧಾನ ಸಾನ್ನಿಧ್ಯದಲ್ಲಿ.
o ಸಂಜೆ 4:30 ಗಂಟೆಗೆ:ಮಲಯಾಳಂ ಭಾಷೆಯಲ್ಲಿ ದಿವ್ಯ ಬಲಿಪೂಜೆ.
o ಸಂಜೆ 6:00 ಗಂಟೆಗೆ (ಪ್ರಧಾನ ಹಬ್ಬದ ಬಲಿಪೂಜೆ):ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ|| ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಮುಖ್ಯ ನೇತ್ರತ್ವದಲ್ಲಿನೆರವೇರಲಿದೆ.
ಆಶ್ರಮದ ಆಡಳಿತ ಮಂಡಳಿಯು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸದ್ಭಕ್ತರೆಲ್ಲರಿಗೂ ಆತ್ಮೀಯವಾದ ಆದರದ ಆಹ್ವಾನವನ್ನು ನೀಡಿದೆ.