ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ:₹24 ಲಕ್ಷ ಮೌಲ್ಯದ 240 ಗ್ರಾಂ MDMA ವಶ, ಮೂವರ ಬಂಧನ
ಮಂಗಳೂರು: ಬೆಂಗಳೂರು ನಗರದಿಂದ MDMA ಮಾದಕವಸ್ತುವನ್ನು ಖರೀದಿಸಿ ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸೆ.26ರಂದು ಸಂಜೆ ಉಳ್ಳಾಲ ತಾಲೂಕಿನ ಮುಡಿಪು ಕಾಯರ್ಗೋಳಿ ಕ್ರಾಸ್ ಬಳಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹24 ಲಕ್ಷ ಮೌಲ್ಯದ 240 ಗ್ರಾಂ MDMA, ನಾಲ್ಕು ಮೊಬೈಲ್ ಫೋನ್ಗಳು ಹಾಗೂ ಮಾದಕವಸ್ತು ಸಾಗಾಟಕ್ಕೆ ಬಳಸಿದ್ದ ಟೆಂಪೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ₹29.80 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ನವಾಜ್ ಅಲಿಯಾಸ್ ನವ್ವಾ ಅಲಿಯಾಸ್ ಮುಡಿಪು ನವಾಜ್ (35), ಮೊಹಮ್ಮದ್ ಆರೀಫ್ ಎನ್. (36) ಹಾಗೂ ಲಾಯ್ಡ್ ಡಿಸೋಜಾ (35) ಎಂದು ಗುರುತಿಸಲಾಗಿದೆ. ಮೂವರೂ ಮುಡಿಪು ಹಾಗೂ ಕೈರಂಗಳ ಪ್ರದೇಶದ ನಿವಾಸಿಗಳಾಗಿದ್ದಾರೆ.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನವಾಜ್ ವಿರುದ್ಧ 16 ಪ್ರಕರಣಗಳು
ಬಂಧಿತ ಆರೋಪಿ ನವಾಜ್ ಅಲಿಯಾಸ್ ನವ್ವಾ ಅಲಿಯಾಸ್ ಮುಡಿಪು ನವಾಜ್ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಬೆದರಿಕೆ, ಕೊಲೆಯತ್ನ, ಅಪಹರಣ, ಅತ್ಯಾಚಾರ, ವಂಚನೆ, ಮೋಸ, ದನಗಳ್ಳತನ ಹಾಗೂ ಮಾದಕವಸ್ತು ಮಾರಾಟ ಸೇರಿದಂತೆ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವುಗಳಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ 12, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2, ಮುಲ್ಕಿ ಪೊಲೀಸ್ ಠಾಣೆಯಲ್ಲಿ 1 ಹಾಗೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಉಳ್ಳಾಲ ಹಾಗೂ ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ತಲಾ ಎರಡು ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಲದ ಇತರ ಆರೋಪಿಗಳಿಗಾಗಿ ಶೋಧ
MDMA ಮಾರಾಟ ಮತ್ತು ಸಾಗಾಟದ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
