ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ ನೆರವು
ಮಂಗಳೂರು: ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿ ನೆರವಿಗೆ ಬಂದ ಬಿಜೆಪಿ ಮುಖಂಡರು, ಕೃತಕ ಕಾಲುಗಳ ಜೋಡಣೆಗೆ ಲೋಧ ಟ್ರಸ್ಟ್ ನಿಂದ 23 ಲಕ್ಷ ನೆರವು
ಕಳೆದ ವರ್ಷ ಮೇ 30ರಂದು ಸುರಿದ ರಣಮಳೆಗೆ ಮಂಜನಾಡಿಯಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಎರಡು ಮಕ್ಕಳು ಹಾಗೂ ತನ್ನೆರಡೂ ಕಾಲುಗಳನ್ನು ಕಳಕೊಂಡಿದ್ದ ಅಶ್ವಿನಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿರ್ದೇಶನದಂತೆ ಸ್ಪಂದಿಸಲಾಗಿದ್ದು, ಮಹಾರಾಷ್ಟ್ರದ ಲೋಧ ಚಾರಿಟೇಬಲ್ ಟ್ರಸ್ಟ್ ರೂ.23 ಲಕ್ಷದ ದೊಡ್ಡ ಮೊತ್ತವನ್ನು ಅಶ್ವಿನಿಯವರಿಗೆ ಕೃತಕ ಕಾಲುಗಳ ಜೋಡಣೆಗಾಗಿ ನೀಡಿದೆಯೆಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಜನಾಡಿ ದುರಂತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದ ಅಶ್ವಿನಿಯವರ ಹರೇಕಳದ ತವರು ಮನೆಗೆ ಭೇಟಿ ನೀಡಿ ಕೃತಕ ಕಾಲುಗಳ ಜೋಡಣೆಗೆ ರೂ.23 ಲಕ್ಷದ ಚೆಕ್ ಹಸ್ತಾಂತರಿಸಿ ಅವರು ಮಾತನಾಡಿದರು. ಕಳೆದ ವರ್ಷ ಸುರಿದಿದ್ದ ಭಾರೀ ಮಳೆಗೆ ಅಶ್ವಿನಿಯವರ ಮನೆ ಕುಸಿದು ಅವರ ಇಬ್ಬರು ಪುಟ್ಟ ಕಂದಮ್ಮಗಳು ಹಾಗೂ ಅತ್ತೆ ಸಾವನ್ನಪ್ಪಿದ್ದರು. ಘಟನೆಯಲ್ಲಿ ಅಶ್ವಿನಿ ಕೂಡ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡರೆ, ಅವರ ಮಾವ ಒಂದು ಕಾಲು ಕಳೆದುಕೊಂಡಿದ್ದರು. ಅಶ್ವಿನಿಯವರಿಗೆ ಎರಡು ಕೃತಕ ಕಾಲುಗಳನ್ನು ಒದಗಿಸುವುದು ಕುಟುಂಬದ ಬೇಡಿಕೆಯಾಗಿತ್ತು. ಕೃತಕ ಕಾಲುಗಳಿಗೆ ರೂ.23 ಲಕ್ಷ ತಗಲುವುದರಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಬೇಡಿಕೆ ಮುಂದಿಟ್ಟಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರು ಖುದ್ದಾಗಿ ಕರೆ ಮಾಡಿ ಕುಟುಂಬದ ಜೊತೆ ನಿಲ್ಲುವಂತೆ ಸೂಚಿಸಿದ್ದರು. ಆ ನಿಟ್ಟಿನಲ್ಲಿ ಮಹಾರಾಷ್ಟ್ರ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಮಂಗಲ್ ಪ್ರಭಾತ್ ಲೋಧ ಅವರ ಲೋಧ ಚಾರಿಟೇಬಲ್ ಟ್ರಸ್ಟ್ ಗೆ ಮನವಿ ಮಾಡಿದ ಕೂಡಲೇ ತಕ್ಷಣ ಅವರು ಸ್ಪಂದಿಸಿ ಕೃತಕ ಕಾಲುಗಳಿಗೆ ತಗಲುವ ರೂ. 23 ಲಕ್ಷ ರೂಪಾಯಿಗಳನ್ನು ಒದಗಿಸಿದ್ದಾರೆ. ಆಂಡೋ ಲೈಟ್ ಅನ್ನುವ ಕಂಪೆನಿ ಕೃತಕ ಕಾಲು ಜೋಡಣೆಗೆ ಮುಂದಾಗಿದೆ. ಟ್ರಸ್ಟ್ ಮುಖ್ಯಸ್ಥರಾದ ಮಂಗಲ್ ಪ್ರಭಾತ್ ಲೋಧ ಅವರು ನೇರವಾಗಿ ಅಶ್ವಿನಿ ಜೊತೆಗೆ ಮಾತನಾಡಿದ್ದಾರೆಂದು ನಳಿನ್ ಕಟೀಲ್ ಹೇಳಿದರು.
ಅಶ್ವಿನಿ ಕುಟುಂಬಸ್ಥರು ನೂತನ ಮನೆ ನಿರ್ಮಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಈ ಭಾಗದ ಶಾಸಕರಾದ ಯು.ಟಿ.ಖಾದರ್ ಅವರು ಸಚಿವರಾಗಿದ್ದು, ಅವರು ನಿವೇಶನ ಒದಗಿಸಿಕೊಟ್ಟಲ್ಲಿ ಮನೆ ಕಟ್ಟಿಕೊಡುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ನಳಿನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ದುರಂತದಲ್ಲಿ ಅಶ್ವಿನಿ ಅವರ ಮಕ್ಕಳಾದ ಆರ್ಯನ್ (3), ಆರೂಶ್ (2) ಹಾಗೂ ಅವರ ಅಜ್ಜಿ ಪ್ರೇಮಾ (60) ಮೃತಪಟ್ಟಿದ್ದರು. ಅಶ್ವಿನಿ ಗಂಭೀರ ಗಾಯಗೊಂಡಿದ್ದು, ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು. ಘಟನೆ ನಡೆದ ತಕ್ಷಣ ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತ, ಭಾರೀ ಮಳೆಯಿಂದಲೇ ಗುಡ್ಡ ಕುಸಿತ ಸಂಭವಿಸಿದೆ ಎಂದು ವರದಿ ನೀಡಿತ್ತು. ಮನೆಯ ಮೇಲ್ಬಾಗದಲ್ಲಿ ರಸ್ತೆ ನಿರ್ಮಾಣಕ್ಕಾಗಿ ನಡೆದಿದ್ದ ಭೂ ಅಗೆತವೇ ದುರಂತಕ್ಕೆ ಕಾರಣವಾಗಿರಬಹುದು ಎಂದು ಆರೋಪಿಸಿ ಕುಟುಂಬಸ್ಥರು ನಿರಂತರ ಹೋರಾಟ ನಡೆಸಿದ್ದರು. ಕುಟುಂಬದ ನಿರಂತರ ಒತ್ತಾಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅಂತಿಮವಾಗಿ ಎನ್ಐಟಿಕೆ ಮೂಲಕ ತಾಂತ್ರಿಕ ತನಿಖೆ ನಡೆಸಲು ಆದೇಶಿಸಿತ್ತು. ಇದೀಗ ಎನ್ಐಟಿಕೆ ಸಲ್ಲಿಸಿರುವ ವರದಿಯಲ್ಲಿ, ಭೂ ಅಗೆತದಿಂದಲೇ ಗುಡ್ಡ ಕುಸಿತ ಸಂಭವಿಸಿ ದುರಂತ ಸಂಭವಿಸಿದೆ ಎಂದು ಉಲ್ಲೇಖಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಈ ವರದಿ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
