ಮಣಿಪಾಲ : ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹೊತ್ತಿ ಉರಿದ ಹೊಟೇಲ್
ಮಣಿಪಾಲ: ಮಣಿಪಾಲ ಆರ್.ಎಸ್.ಬಿ ಸಭಾಭವನದ ಸಮೀಪದ ಕಟ್ಟಡದಲ್ಲಿರುವ ಹೊಟೇಲೊಂದರಲ್ಲಿ ಇಂದು ಸಂಜೆ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಇದರ ಪರಿಣಾಮ ಇಡೀ ಹೊಟೇಲ್ ಸುಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ.
ಡೆಲ್ಲಿ ಡಾಬಾ ಎಂಬ ಹೊಟೇಲಿನ ಒಂದು ಗ್ಯಾಸ್ ಸಿಲಿಂಡರ್ ಅಕಸ್ಮಿಕವಾಗಿ ಸ್ಪೋಟಗೊಂಡಿತ್ತೆನ್ನಲಾಗಿದೆ. ಇದರಿಂದ ಹೊಟೇಲ್ನಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದು, ಕ್ಷಣ ಮಾತ್ರದಲ್ಲೇ ಬೆಂಕಿ ಕೆನ್ನಾಲಿಗೆ ಇಡೀ ಹೊಟೇಲ್ ವಿಸ್ತರಿಸಿತು.
ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಇನ್ನೆರೆಡು ಗ್ಯಾಸ್ ಸಿಲಿಂಡರ್ಗಳು ಸ್ಪೋಟಗೊಳ್ಳದಂತೆ ತಡೆದರು ಎಂದು ತಿಳಿದುಬಂದಿದೆ. ಇದರಿಂದ ಯಾವುದೇ ಜೀವ ಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಮಣಿಪಾಲದಲ್ಲಿನ ಡೆಲ್ಲಿ ಧಾಬಾ ರೆಸ್ಟೋರೆಂಟ್ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಧಾಬಾದ ಒಳಗಿದ್ದ ಎರಡು ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಂಡಿವೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಈಗಾಗಲೇ ಪರಿಶೀಲನೆ ನಡೆಸಿದ್ದು, ಯಾವುದೇ ಸಂಶಯಾಸ್ಪದ ಅಂಶಗಳು ಕಂಡುಬಂದಿಲ್ಲ. ವದಂತಿಗಳು ಹರಡದಂತೆ ಈ ಸ್ಪಷ್ಟೀಕರಣವನ್ನು ನೀಡಲಾಗುತ್ತಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.
