ಮಣಿಪಾಲ: ಭಿನ್ನ ವಿಚಾರಗಳನ್ನು ಭಿನ್ನ ನಂಬಿಕೆಗಳನ್ನು ಸಹಿಸಿಕೊಳ್ಳಲು, ಗೌರವ ನೀಡಲು ನಾವು ತಯಾರಾಗಬೇಕಿದ್ದರೆ, ಭಿನ್ನ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಹೇಳಿದರು.
ಅವರು ಶುಕ್ರವಾರ ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್ ಮಾಜಿ ಗೌರವ ನಿರ್ದೇಶಕ ಪತ್ರಕರ್ತ ಎಂ.ವಿ ಕಾಮತ್ ಸ್ಮರಣಾರ್ಥ ಸ್ಕೂಲ್ ಆಫ್ ಕಮ್ಯುನಿಕೇಶನ್ ವತಿಯಿಂದ ರಾಷ್ಟ್ರೀಯ ಮಟ್ಟದ ಪಾರ್ಲಿಮೆಂಟರಿ ಚರ್ಚಾ ಸ್ಪರ್ಧೆ ಪ್ರೋ ವರ್ಬ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಮಹಾರಾಷ್ಟ್ರ, ಕರ್ನಾಟಕದಲ್ಲಿ ಇತ್ತೀಚೆಗೆ ಭಿನ್ನ ವಿಚಾರಗಳನ್ನು ಮಂಡಿಸುವವರನ್ನು ಕೊಲೆ ಮಾಡಿರುವುದನ್ನು ನಾವು ಕಂಡಿದ್ದೇವೆ. ನಮ್ಮ ಚಿಂತನೆ, ನಮ್ಮ ನಂಬಿಕೆಯೇ ಅಂತಿಮ ಎಂದು ತಿಳಿದುಕೊಂಡಾಗ ಇಂಥ ಕೃತ್ಯಗಳು ನಡೆಯುತ್ತವೆ. ಇತರ ಚಿಂತನೆ ಸಿದ್ದಾಂತಗಳನ್ನು ತಿಳಿಯುವ, ವಿನಿಮಯ ಮಾಡಿಕೊಳ್ಳುವ ಮೂಲಕ ಅರಿವು ವಿಸ್ತರಿಸಲು ಸಾಧ್ಯ ಎಂದರು.
ಭಾಷಣಕ್ಕಿಂತ ಚರ್ಚೆ, ಸಂವಾದಗಳ ಪ್ರಭಾವ ಹೆಚ್ಚು. ಜತೆಗೆ ಶಿಸ್ತು, ವ್ಯಕ್ತಿತ್ವ ಮತ್ತು ನೈತಿಕತೆಯನ್ನು ರೂಪಿಸಕೊಳ್ಳಲು ಇದು ಸಹಕಾರಿಯಾಗುತ್ತದೆ ಎಂದರು. ಭಾರತದಲ್ಲಿ 1980 ರ ಈಚೆಗೆ ಸಂಸತ್ತಿನ ಚರ್ಚೆಗಳು ಬರೀ ಬೊಬ್ಬೆಯಾಗಿ ಮಾರ್ಪಟ್ಟಿವೆ. ಘನತೆಯಿಂದ ಚರ್ಚೆಗಳು ನಡೆಯುತ್ತಿಲ್ಲ. 2014ರಲ್ಲಿ ಸಂಸತ್ ಅಧಿವೇಶನಕ್ಕೆ 14 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಯಿತು ಆದರೆ ರೈಲ್ವೆ ಬಜೆಟಿಗೆ ಸಂಬಂಧಿಸಿದಂತೆ 4 ನಿಮಿಷ ಮತ್ತು ಪ್ರಧಾನ ಬಜೆಟಿಗೆ ಸಂಬಂಧಿಸಿದಂತೆ 7 ನಿಮಿಷ ಚರ್ಚೆಗಳು ಮಾತ್ರ ನಡೆದವು ಎಂದು ವಿಷಾದ ವ್ಯಕ್ತಪಡಿಸಿದರು.
ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್ ಇದರ ನಿರ್ದೇಶಕಿ ಡಾ ನಂದಿನಿ ಲಕ್ಷ್ಮೀಕಾಂತ್ ಮತ್ತು ಡಾ ಚಂದ್ರಶೇಖರ್ ಅಡಿಗ ಉಪಸ್ಥಿತರಿದ್ದರು. ಚರ್ಚಾ ಸ್ಪರ್ಧೆಯಲ್ಲಿ ದೇಶದ ವಿವಿಧ ವಿಶ್ವವಿದ್ಯಾನಿಯಲಗಳ 20 ತಂಡಗಳು ಭಾಗವಹಿಸಿದ್ದವು.