ಮಣಿಪಾಲ| ವಿದ್ಯಾರ್ಥಿಗಳ ನಡುವೆ ಜಗಳ : ಮೂವರ ಬಂಧನ
ಮಣಿಪಾಲ: ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಜಗಳ ರಗೆಯಾಗಿ, ಒಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೆಪ್ಟೆಂಬರ್ 18ರಂದು ಬೆಳಿಗ್ಗೆ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿ ರಾಜ್ ಗಿರೀಶ್ ಸುವರ್ಣ ಹಾಗೂ ಅವನ ಸ್ನೇಹಿತ ಸಾತ್ವಿಕ್ ಭಂಡಾರಿ ತರಗತಿಯಲ್ಲಿ ಇದ್ದ ಸಂದರ್ಭದಲ್ಲಿ, ಆರೋಪಿಗಳಾದ ರಾಜ್ ವೀರ್ ಸಿಂಗ್, ವಿಕ್ರಮ್ ಸಿಂಗ್ ಹಾಗೂ ಕ್ರಿಶ್ ಶಾಹ್ ಮಾಲಾವ್ ಅವರು ತರಗತಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ.
ಈ ದಾಳಿಯಲ್ಲಿ ಸಾತ್ವಿಕ್ ಭಂಡಾರಿ ಎಡ ಕೈಭುಜದ ಮೂಳೆ ಮುರಿದುಕೊಂಡಿದ್ದು, ಕೈ ಎತ್ತಲಾಗದಷ್ಟು ಗಂಭೀರ ಗಾಯಗೊಂಡಿದ್ದಾರೆ.
ಈ ಕುರಿತು ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 167/2025ರಂತೆ ಬಿಎನ್ಎಸ್ ಕಲಂ 126(2), 352(2), 351(2), 117(3), 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿತರು ಅದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಮಾದಕ ಪದಾರ್ಥ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.