ಮಳೆಗಾಲ ಎದುರಿಸಲು ಸನ್ನದ್ಧರಾಗಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
* ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಚಿವರು
* ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವ, ಮುಂಜಾಗ್ರತಾ ಕ್ರಮಕ್ಕೆ ಸಚಿವರ ಆದೇಶ
ಉಡುಪಿ: ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವವಿದ್ದು, ಯಾವುದೇ ಪ್ರಾಣಹಾನಿ, ಆಸ್ತಿ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು.
ಮಳೆಗಾಲ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಅಪಾಯಕಾರಿ ಗಿಡ, ಮರಗಳನ್ನು ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.
ವರ್ಷದಲ್ಲಿ ಎಲ್ಲ ಕಾಲು ಸಂಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು, ಇದಕ್ಕಾಗಿ 8 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದ್ದು, ವಿದ್ಯುತ್ ಕಂಬಗಳ ನಿರ್ವಹಣೆ, ಉಳಿದಂತೆ, ಅಗತ್ಯ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ನಗರದಲ್ಲಿ ಸಣ್ಣ ಮಳೆಯಾದರೂ ಸಮಸ್ಯೆಯಾಗುತ್ತಿದ್ದು, ಎಲ್ಲಾ ಇಲಾಖೆಗಳು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಮಳೆಗಾಲ ನಿರ್ವಹಣೆಗೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಅವರು ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನ ನೀಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಈ ವರ್ಷ ಅತೀ ಹೆಚ್ಚು ಮಳೆಯಾಗುವ ಸೂಚನೆಯಿದ್ದು, ಮಳೆಗಾಲದ ವೇಳೆ 24 ಗಂಟೆ ಎಚ್ಚರವಾಗಿದ್ದು, ಪ್ರಾಣ ಹಾನಿಯಾಗದಂತೆ ಜವಾಬ್ದಾರಿಯಾಗಿ ನಿರ್ವಹಿಸಬೇಕು. ಇದಕ್ಕಾಗಿ ಟಾಸ್ಕ್ಫೋರ್ಸ್ ರಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಸಚಿವರು ಹೇಳಿದರು.
ಕೇವಲ 3 ಗ್ರಾಮಗಳಲ್ಲಿ ಸ್ವಲ್ಪ ಕುಡಿಯುವ ನೀರಿನ ಸಮಸ್ಯೆಯಿದ್ದು, ಇದಕ್ಕೆ ಅಗತ್ಯಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಸಚಿವರು, ಕೇವಲ ಕಚೇರಿಯಲ್ಲಿ ಕುಳಿತು ವರದಿ ಮಾಡದೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಕಂಬಗಳ ನಿರ್ವಹಣೆ, ಅಂಗನವಾಡಿ, ಶಾಲೆಗಳ ಕಟ್ಟಡ ಪರಿಸ್ಥಿತಿ ಪರಿಶೀಲಿಸಿ ಅಪಾಯವಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಇದೇ ವೇಳೆ ಸಚಿವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಅರಣ್ಯಾಧಿಕಾರಿ ಗಣಪತಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.