ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಗ್ಯಾರಂಟಿ ಯೋಜನೆ ಮಾಹಿತಿ ಮನೆಮನೆಗೆ ತಲುಪಿಸಿ – ಸೌಮ್ಯ ರೆಡ್ಡಿ
ಉಡುಪಿ: ಕಾಂಗ್ರೆಸ್ ಪಕ್ಷದ ಯೋಜನೆಗಳ ಬಗ್ಗೆ ಬೂತ್ ಮಟ್ಟದಲ್ಲಿ ಸಭೆ ನಡೆಸುವ ಮೂಲಕ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಬಗ್ಗೆ ಪ್ರತಿ ಮನೆ ಮನೆಗೆ ತೆರಳಿ ಮಾಹಿತಿ ನೀಡುವ ಕೆಲಸ ಮಹಿಳೆಯರಿಂದ ನಡೆಯಬೇಕು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಹೇಳಿದರು.
ಅವರು ಶುಕ್ರವಾರ ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸ್ಥಾನಕ್ಕೆ ನೂತನ ಅಧ್ಯಕ್ಷರಾದ ಜ್ಯೋತಿ ಹೆಬ್ಬಾರ್ ಹಾಗೂ ಇತರ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಸಂಕಲ್ಪ, ಸಮರ್ಪಣೆ, ಸಂಘರ್ಷದಿಂದ ಪಕ್ಷ ಸಂಘಟನೆಯನ್ನು ಮತ್ತಷ್ಟು ವ್ಯವಸ್ಥಿತವಾಗಿ ನಡೆಸುವಂತಾಗಬೇಕು. ಈ ಮೂಲಕ ಕರಾವಳಿಯಲ್ಲಿ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ರೂಪುಗೊಳ್ಳಬೇಕು. ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಪರಿಪೂರ್ಣವಾದ ಫಲಿತಾಂಶ ಸಿಗಲು ಸಾಧ್ಯವಿದೆ ಎಂದರು.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಪಕ್ಷ ನಿರಂತರವಾಗಿ ಅಪಪ್ರಚಾರ ಮಾಡುತ್ತಿದೆ ಆದರೆ ಅವರು ಹಲವು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ್ದರೂ ಕೂಡ ಯಾವುದೇ ರೀತಿಯ ಭಾಗ್ಯಗಳನ್ನು ಜನರಿಗೆ ನೀಡಿಲ್ಲ ಬದಲಾಗಿ ಕೇವಲ ಜಾತಿ ಧರ್ಮದ ಹೆಸರಿನಲ್ಲಿ ಜನರಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುವ ಕೆಲಸ ಮಾಡಿತ್ತು. ರಾಜಕೀಯ ಎಂಬುದು ಜನರ ಒಳಿತಿಗೆ ಉಪಯೋಗಿಸಬೇಕು ಎಂದರು.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಆ ಹಣದಿಂದ ಹೊಸಹೊಸ ವ್ಯವಹಾರ ಆರಂಭಿಸಿದ್ದಾರೆ, ಕೆಲವರು ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಬಳಸಿ ಕೊಂಡಿದ್ದಾರೆ. ಉಚಿತ ಬಸ್ ಪ್ರಯಾಣದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾಭಿಮಾನದಿಂದ ಎಲ್ಲ ಕಡೆ ತಿರುಗಾಡುತ್ತಿದ್ದಾರೆ. ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಮಹಿಳೆಯರ ಕೈ ಬಲಪಡಿಸಲು ಸರಕಾರ ಈ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಭೆ ನಡೆಸಿ ಅದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ ಕಾಂಗ್ರೆಸ್ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಮಹಿಳಾ ಕಾಂಗ್ರೆಸ್ ಸಂಘಟಿತವಾಗಬೇಕು. ಅದರೊಂದಿಗೆ ಪ್ರತಿ ಬ್ಲಾಕ್ ಅಧ್ಯಕ್ಷರನ್ನು ನೇಮಿಸಿ ಸಮಿತಿ ರಚನೆಯಾಗಬೇಕು. ಅದರೊಂದಿಗೆ ಪ್ರತಿ ಬ್ಲಾಕ್ ಮಟ್ಟದಲ್ಲಿ ಮಹಿಳಾ ಹಾಗೂ ಯುವ ಸಮಿತಿ ಸಮಾವೇಶ ನಡೆಯಬೇಕು ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಸಂವಿಧಾನವೇ ಕಾಂಗ್ರೆಸ್ ಸಿದ್ಧಾಂತವಾಗಿದ್ದು, ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕೆಲಸ ಮಾಡುತ್ತಿದೆ. ಸಮಾಜವಾದ ಹಾಗೂ ಸೆಕ್ಯೂಲರ್ ನಮ್ಮ ಸಮಾಜದ ಆಶಯವಾಗಿದೆ. ಆದರೆ ಆರ್ಎಸ್ಎಸ್ ಇದನ್ನು ತೆಗೆದುಹಾಕಬೇಕು ಎನ್ನುತ್ತಿದೆ. ಇದರಿಂದ ಬಡವರು ಬಡವರಾಗಿಯೇ ಉಳಿಯುತ್ತಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ ಎಂದರು.
ಮಹಿಳೆಯರ ಬಗ್ಗೆ ಬಿಜೆಪಿ ಪಕ್ಷಕ್ಕೆ ನಿಜವಾಗಿಯೂ ಗೌರವವಿದ್ದರೆ ಸರಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಅವಾಚ್ಯ ಶಬ್ದಗಳಿಂದ ಮಾತನಾಡಿರುವ ಬಿಜೆಪಿ ಎಂಎಲ್ಸಿ ರವಿಕುಮಾರ್ ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಉದಯ್ ಕುಮಾರ್ ಶೆಟ್ಟಿ, ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಸರಳಾ ಕಾಂಚನ್, ಲಾವಣ್ಯ ಬಲ್ಲಾಳ್, ಮಮತಾ ಗಟ್ಟಿ, ಹರೀಶ್ ಕಿಣಿ, ದಿನಕರ ಹೇರೂರು, ವೆರೋನಿಕಾ ಕರ್ನೆಲಿಯೋ, ಕೃಷ್ಣ ಶೆಟ್ಟಿ ಬಜಗೋಳಿ ಹಾಗೂ ಇತರರು ಉಪಸ್ಥಿತರಿದ್ದರು.
ಮಹಿಳಾ ಕಾಂಗ್ರೆೆಸ್ನ ಮಾಜಿ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ ಸ್ವಾಗತಿಸಿದರು. ಸತೀಶ್ ಕೊಡವೂರು ಹಾಗೂ ಸುಚರಿತಾ ಕಾಪು ಕಾರ್ಯಕ್ರಮ ನಿರೂಪಿಸಿದರು.