ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಿದಾಗ ಸಾಧ್ಯ: ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು : ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಿದಾಗ ಸಾಧ್ಯ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಾದಕದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ಮಂಗಳೂರು ನಗರ ಪೊಲೀಸ್ ವತಿಯಿಂದ ಯೆನೆಪೋಯ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಈ ಪಿಡುಗನ್ನು ನಿಯಂತ್ರಿಸುವ ಪ್ರಯತ್ನಗಳಿಗೆ ಪ್ರತಿರೋಧ ಇರುವ ತನಕ ಈ ಸಮಸ್ಯೆ ಮುಂದುವರಿಯುತ್ತಲೇ ಇರುತ್ತದೆ ಎಂದು ಎಂದು ಅವರು ಹೇಳಿದರು.
ಒಂದು ವರ್ಷದಲ್ಲಿ ಮಾದಕ ದ್ರವ್ಯ ಸಂಬಂಧಿತ ಅಪರಾಧಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾ ಗಿದೆ. ಸಮಾಜದ ಸುಮಾರು ಶೇ. 80 ರಷ್ಟು ಮಂದಿ ಮಾದಕ ಪದಾರ್ಥಗಳ ಬಳಕೆ ವಿರುದ್ಧ ಸಕ್ರಿಯವಾಗಿ ಧ್ವನಿ ಎತ್ತುತ್ತಿದ್ದಾರೆ. ಆದರೆ, ಕ್ರಮಗಳನ್ನು ವಿರೋಧಿಸುವ ಇನ್ನುಳಿದ ಶೇ. 20 ರಷ್ಟು ಜನರು ಸಮಸ್ಯೆಯನ್ನು ಜೀವಂತವಾಗಿಡಲು ಕಾರಣವಾಗಿದ್ದಾರೆ ಎಂದು ಅವರು ವಿಷಾದಿಸಿದರು.
*400 ಪೆಡ್ಡರ್ಗಳ ಬಂಧನ: ಒಂದು ವರ್ಷದಲ್ಲಿ ಸುಮಾರು 400 ಪೆಡ್ಡರ್ಗಳನ್ನು ಬಂಧಿಸಲಾಗಿದ್ದು, 2,000 ಕ್ಕೂ ಹೆಚ್ಚು ಡ್ರಗ್ಸ್ ಬಳಕೆದಾರರನ್ನು ಗುರುತಿಸಲಾಗಿದೆ. ಅವರಲ್ಲಿ ಅನೇಕರಿಗೆ ಕೌನ್ಸೆಲಿಂಗ್ ಮಾಡಲಾಗಿದ್ದು, ಉಳಿದ ವರನ್ನು ವಶಕ್ಕೆ ಪಡೆಯಲಾಗಿದೆ. ನಂತರದ ಫಾಲೋ-ಅಪ್ ತಪಾಸಣೆಗಳು ಸುಧಾರಣೆಯನ್ನು ತೋರಿಸಿದ್ದು, ಹಿಂದೆ ಗುರುತಿಸಲಾದ ಬಳಕೆದಾರರಲ್ಲಿ ಸುಮಾರು ಶೇ. 90 ರಷ್ಟು ಜನರಲ್ಲಿ ಪಾಸಿಟಿವ್ ಅಂಶ ಕಂಡುಬಂದಿಲ್ಲ (ನೆಗೆಟಿವ್ ಬಂದಿದೆ). ಕೇವಲ ಶೇ. 10 ರಷ್ಟು ಜನರು ಮಾತ್ರ ಮಾದಕ ದ್ರವ್ಯ ಬಳಕೆಯನ್ನು ಮುಂದುವರಿಸಿದ್ದಾರೆ ಎಂದು ಅವರು ಹೇಳಿದರು.
ಈ ವರ್ಷದ ಜಾಗತಿಕ ಘೋಷವಾಕ್ಯವಾದ ‘ಮಾದಕ ದ್ರವ್ಯ ಸಮಸ್ಯೆಗಳು: ನಿರಂತರ ಸವಾಲುಗಳು, ಹೊಸ ಸವಾಲುಗಳು, ನವೀನ ಸಂಪನ್ಮೂಲಗಳು’ ಎಂಬುದನ್ನು ಉಲ್ಲೇಖಿಸಿದ ಆಯುಕ್ತ ರೆಡ್ಡಿ, ಸಣ್ಣ ಮತ್ತು ವ್ಯವಸ್ಥಿತ ಹಂತ ಹಂತದ ಕ್ರಮಗಳಲ್ಲಿಯೇ ಇದಕ್ಕೆ ಪರಿಹಾರವಿದೆ ಎಂದರು.
ಕ್ಯೂಆರ್ ಕೋಡ್ ಆಧಾರಿತ ವ್ಯವಸ್ಥೆಯ ಮೂಲಕ ವಾರಕ್ಕೆ ಸುಮಾರು 20 ದೂರುಗಳು ಬರುತ್ತಿದ್ದು, ಇದರಿಂದಾಗಿ ಸುಮಾರು 10 ಪ್ರಕರಣಗಳು ದಾಖಲಾಗುತ್ತಿವೆ ಎಂದು ಅವರು ತಿಳಿಸಿದರು.
ಜೂನ್ 2025 ಮತ್ತು ಮೇ 2026 ರ ನಡುವೆ ಕಾಲೇಜು ಆಡಳಿತ ಮಂಡಳಿಗಳು 5,960 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಿದ್ದರೆ, ಪೊಲೀಸರು 672 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
