ಮೀನುಗಾರರಿಗೆ ನ್ಯಾಯ- ಗಲ್ಫ್ ಉದ್ಯೋಗಿಗಳಿಗೆ ನೆಮ್ಮದಿ: ಮೊಹಿದೀನ್ ಬಾವಾ
ಮ0ಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಬಜೆಟ್‍ನಲ್ಲಿ ಮೀನುಗಾರರಿಗೆ ನ್ಯಾಯ ಒದಗಿಸಿದೆ ಎಂದು ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಮೀನುಗಾರರಿಗೆ ಡೀಸೆಲ್ ಮತ್ತು ಸೀಮೆಎಣ್ಣೆ ಸಬ್ಸಿಡಿ ಒದಗಿಸಿದ್ದರು. ಇದೀಗ ಮೊಗವೀರರು, ಬೆಸ್ತರ ಸಮಗ್ರ ಅಭಿವೃದ್ಧಿಗಾಗಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಸ್ಥಾಪನೆ ಮಾಡುವ ಮೂಲಕ ಮೀನುಗಾರಿಕೆ ಕುಲಕಸುಬಿನ ಸಮುದಾಯದ ಏಳಿಗೆಗೆ ಮುಖ್ಯಮಂತ್ರಿಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಅದೇ ರೀತಿ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂದಿರುಗುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕೇರಳ ಮಾದರಿಯ ಕಾರ್ಯಕ್ರಮ ಜಾರಿ ಮಾಡಲಾಗಿದೆ. ಬಜೆಟ್‍ಗೆ ಮುಂಚೆ ತಾನು ಮುಖ್ಯಮಂತ್ರಿಗಳಲ್ಲಿ ಈ ಬೇಡಿಕೆ ಇಟ್ಟಿದ್ದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಬಜೆಟ್ ನಲ್ಲಿ ಪ್ರಕಟಿಸಿರುವುದು ಶ್ಲಾಘನೀಯ. ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಿಂದೆಂದೂ ನೀಡದಷ್ಟು ಅನುದಾನ ನೀಡಲಾಗಿದೆ ಎಂದು ಶಾಸಕ ಮೊಹಿದೀನ್ ಬಾವಾ ತಿಳಿಸಿದ್ದಾರೆ.