Home Mangalorean News Kannada News ಮೀಸಲಾತಿ ರೋಟೇಶನ್ ಪದ್ಧತಿಯ ಪ್ರಕಾರ ಪಾಲಿಕೆ ಚುನಾವಣೆ ನಡೆಯಲಿ, ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ ಶಾಸಕರಾದ ಕಾಮತ್,...

ಮೀಸಲಾತಿ ರೋಟೇಶನ್ ಪದ್ಧತಿಯ ಪ್ರಕಾರ ಪಾಲಿಕೆ ಚುನಾವಣೆ ನಡೆಯಲಿ, ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ ಶಾಸಕರಾದ ಕಾಮತ್, ಭರತ್ ಶೆಟ್ಟಿ

Spread the love

ಮೀಸಲಾತಿ ರೋಟೇಶನ್ ಪದ್ಧತಿಯ ಪ್ರಕಾರ ಪಾಲಿಕೆ ಚುನಾವಣೆ ನಡೆಯಲಿ, ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ ಶಾಸಕರಾದ ಕಾಮತ್, ಭರತ್ ಶೆಟ್ಟಿ

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಾರ್ಡು ಮೀಸಲಾತಿಯಲ್ಲಿ ರೋಟೇಶನ್ ಪದ್ಧತಿಯನ್ನು ಅನುಸರಿಸಲಾಗಿಲ್ಲ ಎಂದು ಸೋಮವಾರ ಕರ್ನಾಟಕ ಉಚ್ಚ ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ಸ್ವಾಗತಿಸುವುದಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ನಗರ ಉತ್ತರ ಶಾಸಕ ಡಾ|ಭರತ್ ಶೆಟ್ಟಿ ಹೇಳಿದ್ದಾರೆ.

ಪಾಲಿಕೆ ಚುನಾವಣೆಯಲ್ಲಿ ವಾರ್ಡುಗಳಲ್ಲಿ ಮೀಸಲಾತಿ ರೋಟೇಶನ್ ಪದ್ಧತಿ ಪ್ರಕಾರ ನಡೆಯದೇ, ಪಾಲಿಕೆಯಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಮೀಸಲಾತಿಯನ್ನು ತಂದಿದ್ದರು. ಇದನ್ನು ವಿರೋಧಿಸಿ ಕೆಲವರು ನ್ಯಾಯಾಲಯ ಮೊರೆ ಹೋಗಿದ್ದರು. ಕೋರ್ಟ್ ವಾದಿಗಳ ಮತ್ತು ಪ್ರತಿವಾದಿಗಳ ವಾದಗಳನ್ನು ಆಲಿಸಿ ಚುನಾವಣೆಯನ್ನು ಮೀಸಲಾತಿಯಲ್ಲಿ ರೋಟೇಶನ್ ಪದ್ಧತಿಯನ್ನು ಪಾಲಿಸಬೇಕು ಎಂದು ತೀರ್ಪು ನೀಡಿದೆ. ಇದು ಅಧಿಕಾರದಲ್ಲಿದ್ದಾಗ ತಮಗೆ ಬೇಕಾದ ಹಾಗೆ ಅಧಿಕಾರವನ್ನು ದುರ್ಬಳಕೆ ಮಾಡುವ ಕಾಂಗ್ರೆಸ್ ಜಾಯಮಾನಕ್ಕೆ ತೀವ್ರ ಹಿನ್ನಡೆಯನ್ನು ನೀಡಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಪಾಲಿಕೆ ಚುನಾವಣೆಯಲ್ಲಿ ಗೆಲ್ಲಬೇಕೆಂದು ವಾಮಮಾರ್ಗದಿಂದ ಪ್ರಯತ್ನಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಮುಖಂಡರೂ ಆಗಿರುವ ಯುಟಿ ಖಾದರ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳು ಮಾತ್ರ ಗೆಲ್ಲಬೇಕೆಂದು ತಮಗೆ ಅನುಕೂಲವಾಗುವಂತೆ ಮೀಸಲಾತಿ ಪಟ್ಟಿಯನ್ನು ರಚಿಸಿದ್ದರು. ಆದರೆ ಈಗ ನ್ಯಾಯಾಲಯ ನೀಡಿರುವ ತೀರ್ಪು ಸಚಿವ ಖಾದರ್ ಅವರಿಗೆ ಮತ್ತು ಕಾಂಗ್ರೆಸ್ ಮುಖಂಡರಿಗೆ ತೀವ್ರ ಮುಖಭಂಗವಾಗಿದೆ. ಈ ರೀತಿ ಮೀಸಲಾತಿಯನ್ನು ತಮಗೆ ಅನುಕೂಲವಾಗುವಂತೆ ಮಾಡಿ ಹಿಂದಿನ ಬಾರಿಯಂತೆ ಈ ಬಾರಿಯೂ ಅಧಿಕಾರದಲ್ಲಿ ಉಳಿಯುವ ದುರಾಸೆ ಹೊಂದಿದ್ದ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಈ ತೀರ್ಪು ಬಿಜೆಪಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಹೆಚ್ಚಿನ ಶಕ್ತಿ ನೀಡಿದೆ. ಇನ್ನು ಬರುವ ದಿನಗಳಲ್ಲಾದರೂ ನ್ಯಾಯಮಾರ್ಗದಿಂದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಪ್ರಯತ್ನಿಸಲಿ ಮತ್ತು ಬಿಜೆಪಿಯನ್ನು ಎದುರಿಸಲು ನೇರಮಾರ್ಗದಿಂದ ಬರಲಿ. ರಾಜ್ಯ ಸರಕಾರದ ಆಟರ್ನಿ ಜನರಲ್ ಅವರು ಸರಕಾರದ ಪರವಾಗಿ ಮೀಸಲಾತಿ ಸರಿ ಇದೆ ಎಂದು ನಿತ್ಯ ವಾದ ಮಂಡಿಸಿದ್ದರೂ ನ್ಯಾಯಾಲಯ ಮೀಸಲಾತಿಯಲ್ಲಿ ರೋಟೇಶನ್ ಪದ್ಧತಿಯಂತೆ ಚುನಾವಣೆ ನಡೆಸಬೇಕು ಎಂದು ಹೇಳಿರುವುದು ಸತ್ಯಕ್ಕೆ ಸಂದ ಜಯ. ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಬೇಕೆಂದು ಅನೈತಿಕ ಮಾರ್ಗ ಹಿಡಿದ ಕಾಂಗ್ರೆಸ್ಸಿಗೆ ನ್ಯಾಯಾಲಯದ ತೀರ್ಪು ಛೀಮಾರಿ ಹಾಕಿದಂತೆ ಆಗಿದೆ. ಚುನಾವಣೆ ಯಾವಾಗ ನಡೆದರೂ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಶಾಸಕರಾಗಿರುವ ಡಿ ವೇದವ್ಯಾಸ ಕಾಮತ್ ಮತ್ತು ಡಾ|ಭರತ್ ಶೆಟ್ಟಿ ಹೇಳಿದ್ದಾರೆ.


Spread the love

Exit mobile version