ಮುಲ್ಕಿ ಪೊಲೀಸರ ಕಾರ್ಯಾಚರಣೆ: ಭೂಗತ ಪಾತಕಿ ಕಲಿ ಯೋಗೀಶ್ ಸಹಚರ ಶೀನು ಬಂಧನ
ಮಂಗಳೂರು: ಅನೇಕ ವರ್ಷಗಳಿಂದ ಪೊಲೀಸರ ವಶಕ್ಕೆ ಸಿಗದೆ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಕಲಿ ಯೋಗೀಶ್ನ ಸಹಚರ ಶ್ರೀನಿವಾಸ್ ಶೆಟ್ಟಿ ಅಲಿಯಾಸ್ ಶೀನು (45) ಅವರನ್ನು ಮುಲ್ಕಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲೆಯಾದ ಅಪರಾಧ ಸಂ.155/2017 ಹಾಗೂ KCOCA ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯಾಗಿದ್ದ ಶೀನು, ಕಳೆದ ಎಂಟು ವರ್ಷಗಳಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶೀನು, ದಿವಂಗತ ಕೃಷ್ಣ ಶೆಟ್ಟಿ ಅವರ ಪುತ್ರನಾಗಿದ್ದು, ಚಿಟ್ರಾಪು ಗ್ರಾಮ, ಮುಲ್ಕಿ ತಾಲೂಕು ನಿವಾಸಿಯಾಗಿದೆ. ಹಲವು ವರ್ಷಗಳಿಂದ ನ್ಯಾಯಾಲಯದ ಮುಂದೆ ಹಾಜರಾಗದೇ ಇದ್ದ ಕಾರಣ, ಮೈಸೂರು ಪ್ರಿನ್ಸಿಪಲ್ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಿಂದ ಅವನ ವಿರುದ್ಧ ವಾರಂಟ್ ಹಾಗೂ ಘೋಷಣೆ (proclamation) ಹೊರಡಿಸಲಾಗಿತ್ತು.
ಈ ಹಿನ್ನೆಲೆ, ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ, ಮುಲ್ಕಿ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ್ ಬಿ.ಎಸ್., ಉಪನಿರೀಕ್ಷಕ ಉಮೇಶ್ ಕುಮಾರ್ ಎಂ.ಎನ್., ಎಎಸ್ಐ ಸುರೇಶ್ ಕುಂದರ್ ಹಾಗೂ ಹೆಡ್ ಕಾನ್ಸ್ಟೇಬಲ್ ಉದಯ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು.
ಈ ತಂಡವು ಶೀನುನ ಅಡಗುತಾಣದ ಕುರಿತು ಖಚಿತ ಮಾಹಿತಿ ಸಂಗ್ರಹಿಸಿ, ಮುಂಬೈನಲ್ಲಿ ಅವನು ಮರೆತಿದ್ದಾನೆ ಎಂಬ ಮಾಹಿತಿ ಮೇರೆಗೆ ಅಕ್ಟೋಬರ್ 4, 2025 ರಂದು ಬಂಧಿಸಿದೆ. ಬಳಿಕ ಅವನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.