ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರಕ್ಕೆ ರಾಜ್ಯಾದ್ಯಂತ ಆಂದೋಲನ: ಪ್ರಮೋದ್ ಮುತಾಲಿಕ್

Spread the love

ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರಕ್ಕೆ ರಾಜ್ಯಾದ್ಯಂತ ಆಂದೋಲನ: ಪ್ರಮೋದ್ ಮುತಾಲಿಕ್
 

ಬೆಳಗಾವಿ: ಮುಸ್ಲಿಮರ ಮೇಲೆ ‘ಆರ್ಥಿಕ ಬಹಿಷ್ಕಾರ’ಕ್ಕೆ ಶ್ರೀರಾಮ ಸೇನೆಯಿಂದ ದೊಡ್ಡ ಮಟ್ಟದ ಆಂದೋಲನವನ್ನು ರಾಜ್ಯದಾದ್ಯಂತ ನಡೆಸಲಾಗುವುದು’ ಎಂದು ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ನಮ್ಮ ಜಾತ್ರೆಯಲ್ಲಿ ಮತ್ತು ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಂ ವರ್ತಕರಿಗೆ ನಿರ್ಬಂಧ ಹೇರಿರುವುದಕ್ಕೆ ಸಂಘಟನೆಯ ಬೆಂಬಲವಿದೆ’ ಎಂದರು.

‘ಮುಸ್ಲಿಮರ ಜೊತೆ ವ್ಯಾಪಾರ-ವ್ಯವಹಾರಕ್ಕೆ ಆರ್ಥಿಕ ಬಹಿಷ್ಕಾರ ರಾಜ್ಯದಾದ್ಯಂತ ಹಬ್ಬಿದೆ. ಮುಸ್ಲಿಂ ಮಾನಸಿಕತೆ ಬದಲಾಗುವವರೆಗೆ ಈ ರೀತಿಯ ಸಂಘರ್ಷ- ದ್ವೇಷ ನಿರಂತರವಾಗಿ ಇರುವುದೇ. ಮುಸ್ಲಿಂ ವಿಸ್ತಾರವಾದ ಮತ್ತು ಪ್ರತ್ಯೇಕವಾದ ದೇಶಕ್ಕೆ ಮಾರಕ ಮತ್ತು ಗಂಡಾಂತರವಾಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಮರೊಂದಿಗ ವ್ಯಾಪಾರಕ್ಕೆ ಬಹಿಷ್ಕಾರ ಹಾಕಲಾಗುತ್ತಿದೆ’ ಎಂದರು.

ನ್ಯಾಯಾಲಯಕ್ಕೂ ಗೌರವ ನೀಡಿಲ್ಲ: ‘ಲವ್‌ಜಿಹಾದ್, ಹಿಂದೂ ನಾಯಕರ ಕೊಲೆ ಮೊದಲಾದ ಮುಸ್ಲಿಮರ ಕ್ರೌರ್ಯ ಮತ್ತು ಮಾನಸಿಕತೆ ಹಿಂದಿನಿಂದಲೂ ಇದೆ. ಅದನ್ನು ನಿಲ್ಲಿಸುವವರೆಗೆ ಬಹಿಷ್ಕಾರದಂತಹ ಪ್ರಕ್ರಿಯೆ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಇತರ ವ್ಯಾಪಾರ-ವ್ಯವಹಾರ ಹಾಗೂ ಆಟೊರಿಕ್ಷಾ ಏರದಿರುವುದು ಮೊದಲಾದವುಗಳಿಗೂ ಸಂಪೂರ್ಣ ಬಹಿಷ್ಕಾರ ಹಾಕುತ್ತೇವೆ. ಮುಸ್ಲಿಮರು ಗೋಮಾಂಸ ತಿನ್ನುವುದು ಮತ್ತು ಗೋಹತ್ಯೆ ನಿಲ್ಲಿಸುವವರೆಗೆ ಮುಂದುವರಿಯುತ್ತದೆ’ ಎಂದು ಹೇಳಿದರು.

‘ಸಂವಿಧಾನದ ಆಧಾರದ ಮೇಲೆ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಅವು ನೀಡುವ ತೀರ್ಪನ್ನೂ ಆ ಸಮಾಜ ಒಪ್ಪುತ್ತಿಲ್ಲ; ಕಾನೂನಿಗೆ ಗೌರವ ಕೊಡುತ್ತಿಲ್ಲ. ಹಿಜಾಬ್‌ ವಿಷಯದಲ್ಲಿ ನ್ಯಾಯಾಲಯಕ್ಕೆ ಹೋದವರು ಮುಸ್ಲಿಂ ವಿದ್ಯಾರ್ಥಿನಿಯರೆ. ಹೈಕೋರ್ಟ್‌ ನೀಡಿದ ಮಧ್ಯಂತರ ಹಾಗೂ ಅಂತಿಮ ತೀರ್ಪುಗಳೆರಡನ್ನೂ ಧಿಕ್ಕರಿಸಿದ್ದಾರೆ. ಎಸ್‌ಡಿಪಿಐ, ಸಿಎಫ್‌ಐ, ಪಿಎಫ್‌ಐ ಎನ್ನುವ ದೇಶದ್ರೋಹಿ ಸಂಘಟನೆಗಳು, ಮುಲ್ಲಾ-ಮೌಲ್ವಿಗಳು ಕೂಡ ಧಿಕ್ಕರಿಸಿದ್ದಾರೆ. ನ್ಯಾಯಾಲಯದ ಆದೇಶ ಒಪ್ಪದೆ ಸೊಕ್ಕಿನ ಮಾತುಗಳನ್ನು ಆಡುತ್ತಿದ್ದಾರೆ. ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

’32 ವರ್ಷಗಳ ಹಿಂದಿನ ಘಟನೆಗಳನ್ನು ಇಟ್ಟುಕೊಂಡು ದಿ ಕಾಶ್ಮೀರ್‌ ಫೈಲ್ಸ್‌’ ಚಲನಚಿತ್ರದಲ್ಲಿ ತೋರಿಸಿರುವ ಮುಸ್ಲಿಂ ಮಾನಸಿಕತೆ ಇಂದಿಗೂ ಜೀವಂತವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂಗಳು ಮುಸ್ಲಿಮರೊಂದಿಗೆ ವ್ಯಾಪಾರಕ್ಕೆ ಬಹಿಷ್ಕಾರ ಹಾಕಿದ್ದೇವೆ. ಮುಸ್ಲಿಮರ ವ್ಯವಹಾರದ ಅಂಗಡಿಗಳ ಪಟ್ಟಿ ಮಾಡುತ್ತೇವೆ. ಅಲ್ಲಿಗೆ ಹೋಗಬಾರದು ಎಂದು ಹಿಂದೂಗಳಲ್ಲಿ ಸಂಘಟನೆಯಿಂದ ಜಾಗೃತಿ ಮೂಡಿಸುತ್ತೇವೆ’ ಎಂದರು.

‘ಬೆಳಗಾವಿಯ ಪಂತಬಾಳೇಕುಂದ್ರಿ, ಸವದತ್ತಿ ಯಲ್ಲಮ್ಮ, ಹುಕ್ಕೇರಿ ಹೊಳೆಮ್ಮದೇವಿ ದೇವಸ್ಥಾನ ಮೊದಲಾದ ಕಡೆಗಳಲ್ಲಿ ಕುರಿಗಳನ್ನು ಬಲಿ ಕೊಡುವಲ್ಲಿ ಮುಸ್ಲಿಮರು ‘ಹಲಾಲ್‌’ ಮಾಡುವುದನ್ನು ನಿಲ್ಲಿಸುತ್ತೇವೆ. ಸವದತ್ತಿ ಯಲ್ಲಮ್ಮನಗುಡ್ಡದಲ್ಲೂ 100 ಮೀಟರ್‌ ಅಂತರದಲ್ಲಿರುವ ಮುಸ್ಲಿಮರ ಅಂಗಡಿಗಳನ್ನು ಕಾನೂನು ಪ್ರಕಾರ ತೆಗೆಯಬೇಕು. ತೆಗೆಸದಿದ್ದರೆ ನುಗ್ಗುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಹಿಂದೂಗಳ ಅಂಗಡಿಯಲ್ಲಿ ಮುಸ್ಲಿಮರು ಮಾಂಸ ಖರೀದಿಸುವುದಿಲ್ಲ. ಪತಂಜಲಿ, ರಿಲಯನ್ಸ್‌ ಮೊದಲಾದ ಕಂಪನಿಗಳ ಉತ್ಪನ್ನಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಮುಸ್ಲಿಂ ಮುಖಂಡರು ಹೇಳಿದ್ದರು. ಅದಕ್ಕೆ ಉತ್ತರವನ್ನು ಈಗ ಕೊಡುತ್ತಿದ್ದೇವೆ. ಕ್ರಿಯೆಗೆ ಪ್ರತಿಕ್ರಿಯೆ ಇದಾಗಿದೆ. ದೇಶದಲ್ಲಿ ಇರಬೇಕಾದರೆ ಸಂವಿಧಾನ-ಕಾನೂನು ಗೌರವಿಸಬೇಕು. ಬಹುಸಂಖ್ಯಾತ ಹಿಂದೂ ಸಮಾಜದ ಸಂಸ್ಕೃತಿ-ಸಂಪ್ರದಾಯವನ್ನು ಗೌರವದಿಂದ ಕಾಣಬೇಕು. ಇಲ್ಲವಾದರೆ ಎದುರಿಸಲಿ’ ಎಂದು ಸವಾಲು ಹಾಕಿದರು.

‘ನಮ್ಮ ದೇವರನ್ನೆ ಒಪ್ಪದವರು ನಮ್ಮ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಬರುತ್ತೀರೀಕೆ? ನಿಮ್ಮೊಂದಿಗೆ ವ್ಯವಹಾರದ ಅವಶ್ಯಕತೆ ಇಲ್ಲ. ಇದರಲ್ಲಿ ಶಸ್ತ್ರ ಬಳಕೆ ಏನಿಲ್ಲ. ದೇಶದ ಉಳಿವಿಗೆ ಹೀಗೆ ಮಾಡುತ್ತಿದ್ದೇವೆ’ ಎಂದರು.

‘ಬಹಿಷ್ಕಾರ ಹಾಕಿರುವುದು ಕಾನೂನು ಬಾಹಿರವೇನಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಕಾನೂನು ಮಾಡಲಾಗಿದೆ’ ಎಂದು ಸಮರ್ಥಿಸಿಕೊಂಡರು.

‘ಕಾಶ್ಮೀರಿ ಹಿಂದೂಗಳ ಕೊಲೆ ನಡೆಯುವಾಗ ಬಿಜೆಪಿಯವರು ಸುಮ್ಮನಿದ್ದರೇಕೆ?’ ಎಂದು ಕೇಳಿದ ಮುತಾಲಿಕ್, ‘ಹೊರಗಿರುವ 5 ಲಕ್ಷ ಜನರನ್ನು ಕಾಶ್ಮೀರ ಸೇರುವಂತೆ ಬಿಜೆಪಿ ಸರ್ಕಾರ ಮಾಡಬೇಕು’ ಎಂದು ಒತ್ತಾಯಿಸಿದರು.


Spread the love

1 Comment

  1. He is a man who does not makes any sense. So, not worth publishing his statements.

Comments are closed.