ಮೂಡಬಿದರೆ: ಸುರಂಗದಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ
ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾಮದ ಬಂಗ್ಲೆ ಎಂಬಲ್ಲಿ ಬುಧವಾ ರಾತ್ರಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸುರಂಗದೊಳಗೆ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಅತ್ಯಂತ ಸಾಹಸಮಯವಾಗಿ ರಕ್ಷಿಸಿದ್ದಾರೆ.
ಪುತ್ತಿಗೆಯ ಜಾಣಪ್ಪ ಗೌಡರ ಪುತ್ರ ರಾಧಾಕೃಷ್ಣ (38 ವರ್ಷ) ಎಂಬವರು ಬುಧವಾರ ರಾತ್ರಿ ಅಕಸ್ಮಿಕವಾಗಿ ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿದ್ದರು. ಬಿದ್ದ ರಭಸಕ್ಕೆ ಅವರು ಬಾವಿಯ ಒಳಗಿದ್ದ ಸುಮಾರು 20 ಅಡಿ ಆಳದ ಸುರಂಗದೊಳಗೆ ಸಿಲುಕಿಕೊಂಡಿದ್ದರು. ಇದು ರಕ್ಷಣಾ ಕಾರ್ಯಕ್ಕೆ ದೊಡ್ಡ ಸವಾಲಾಗಿತ್ತು.
ರಕ್ಷಣಾ ಕಾರ್ಯಾಚರಣೆ
ರಕ್ಷಣೆ ಕಾರ್ಯಾಚರಣೆಗೆ ಕಾರ್ಕಳ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಚಂದ್ರಶೇಖರ್ ಅವರ ನೇತೃತ್ವದ ತಂಡ ಬಂದಿದ್ದು, ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತು. ಸಿಬ್ಬಂದಿಗಳಾದ ಜಯ ಮೂಲ್ಯ ಹಾಗೂ ರೂಪೇಶ್ ಅವರು ಬಾವಿಯೊಳಗೆ ಇಳಿದಿದ್ದರು. ಇವರಿಗೆ ಸಹೋದ್ಯೋಗಿಗಳಾದ ನಿತ್ಯಾನಂದ ಮತ್ತು ಬಸವರಾಜ ಅವರು ಸಾಥ್ ನೀಡಿದರು.
ಬಾವಿಯ ಕತ್ತಲೆ ಮತ್ತು ಸುರಂಗದ ಸಂಕೀರ್ಣತೆಯ ನಡುವೆಯೂ ಅಗ್ನಿಶಾಮಕ ದಳದವರು ಯಶಸ್ವಿಯಾಗಿ ರಾಧಾಕೃಷ್ಣ ಅವರನ್ನು ಗುರುವಾರ ಬೆಳಗ್ಗೆ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ಮೂಡುಬಿದಿರೆ ಅಗ್ನಿಶಾಮಕ ದಳದಲ್ಲಿ ಸಿಬಂದಿ ಕೊರತೆ ಕಾರಣ ಕಾರ್ಕಳದವರನ್ನು ಕರೆಸಲಾಯಿತು ಎಂದು ತಿಳಿದು ಬಂದಿದೆ.
ಪುತ್ತಿಗೆ ಗ್ರಾಪಂ.ಸದಸ್ಯ ಪುತ್ತಿಗೆ ಪದವು ಜೋಗೇರಿ ದಿನೇಶ್ ಕುಮಾರ್ ಮತ್ತು ಪುತ್ತಿಗೆ ಪಂಚಾಯತ್ ಮಾಜಿ ಅಧ್ಯಕ್ಷರು ಪ್ರವೀಣ್ ಶೆಟ್ಟಿ ರಕ್ಷಣೆ ಕಾರ್ಯಾಚರಣೆಯಲ್ಲಿ ಸಹಕರಿಸಿದರು.
