Home Mangalorean News Kannada News ಮೂಡಬಿದಿರೆ: ವಿವಾಹಿತ ಮಹಿಳೆಯನ್ನು ಬಾವಿಗೆ ದೂಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಮೂಡಬಿದಿರೆ: ವಿವಾಹಿತ ಮಹಿಳೆಯನ್ನು ಬಾವಿಗೆ ದೂಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

Spread the love

ಮೂಡಬಿದಿರೆ: ವಿವಾಹಿತ ಮಹಿಳೆಯನ್ನು ಬಾವಿಗೆ ದೂಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಮಂಗಳೂರು: ಮಹಿಳೆಯನ್ನು ಬಾವಿಗೆ ದೂಡಿ, ಪ್ರಿಯಕರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ ಬುಧವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಬಡಗಮಿಜಾರು ನಿವಾಸಿ ವಿವಾಹಿತ ಮಹಿಳೆ ನಮಿಕ್ಷಾ ಶೆಟ್ಟಿ (29) ಹಾಗೂ ಆಕೆಯ ಪ್ರೇಮಿ ಎನ್ನಲಾದ ನಿಡ್ಡೋಡಿ ಮೂಲದ ಪ್ರಶಾಂತ್ ಎಂದು ಗುರುತಿಸಲಾಗಿದೆ.

ನಮೀಕ್ಷಾಗೆ ಮದುವೆಯಾಗಿದ್ದು, ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ. ಈಕೆಯ ಪತಿ ಸತೀಶ್ ಪೂನಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪ್ರಶಾಂತ್ ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದು, ಮದುವೆಯಾಗಿ ವಿಚ್ಛೇದನ ಆಗಿದೆ. ನಮೀಕ್ಷಾ ಶೆಟ್ಟಿಗೆ ಇನ್ ಸ್ಟಾಗ್ರಾಂ ಮೂಲಕ ಪ್ರಶಾಂತ್ ಪರಿಚಯವಾಗಿತ್ತು ಎಂದು ತಿಳಿದು ಬಂದಿದೆ.

ಗಂಡನ ಜೊತೆ ಸಂಸಾರ ಸರಿ ಹೋಗದೆ ನಮೀಕ್ಷಾ ಮಕ್ಕಳೊಂದಿಗೆ ತಂದೆಯ ಮನೆಯಲ್ಲಿಯೇ ವಾಸವಾಗಿದ್ದರು. ಈ ಮಧ್ಯೆ ಪ್ರಿಯಕರ ಪ್ರಶಾಂತ್, ನಮೀಕ್ಷಾ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತೆ ಬಂದಿದ್ದು, ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ ಎನ್ನಲಾಗಿದೆ.

ಇಬ್ಬರ ನಡುವಿನ ಜಗಳ ತಾರಕಕ್ಕೇರಿದಾಗ ನಮೀಕ್ಷಾಳನ್ನು ಬಾವಿಗೆ ದೂಡಿದ ಪ್ರಶಾಂತ್, ಘಟನೆಯನ್ನು ಆಕೆಯ ಮಗು ನೋಡಿದ್ದರಿಂದ ತಾನೂ ಬಾವಿಗೆ ಹಾರಿದ್ದಾನೆ ಎಂದು ಹೇಳಲಾಗುತ್ತಿದೆ.

ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version