ಮೂರು ತಿಂಗಳಲ್ಲಿ ಉರ್ವ ಮಾರ್ಕೆಟ್ ಕಾಮಗಾರಿ ಪೂರ್ತಿ : ಜೆ.ಆರ್.ಲೋಬೊ
ಮಂಗಳೂರು : ಪ್ರಸ್ತುತ ಮಂಗಳೂರಿನಲ್ಲಿ ಮಾರ್ಕೆಟ್ ಗಳ ಅಭಿವೃದ್ಧಿ ಕಾರ್ಯಗಳು ಬಹಳ ಮಹತ್ವವನ್ನು ಪಡೆದಿದೆ. ಈಗಾಗಲೇ ಬಿಜೈ ಮಾರ್ಕೆಟ್ ಹಾಗೂ ಜೆಪ್ಪು ಮಾರ್ಕೆಟ್ ಕಾಮಗಾರಿಗಳು ಪೂರ್ತಿಯಾಗಿ ಲೋಕಾರ್ಪಣೆಯಾಗಿದೆ. ಅದೇ ರೀತಿ ಕಾಮಗಾರಿ ಹಂತದಲ್ಲಿರುವ ಉರ್ವ ಮಾರ್ಕೆಟ್ ಸಂಕೀರ್ಣಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೊರವರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಸುಮಾರು ರೂ.12.75 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಾರುಕಟ್ಟೆ ತ್ವರಿತ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಕಳೆದ 9 ತಿಂಗಳ ಹಿಂದೆ ಶಿಲಾನ್ಯಾಸ ಕಾರ್ಯ ನಡೆದಿದ್ದು, ಈಗ ಅದು ಮುಕ್ತಾಯದ ಹಂತದಲ್ಲಿದೆ. ಮುಂದಿನ ಮೂರು ತಿಂಗಳ ಒಳಗೆ ಕಾಮಗಾರಿಯು ಸಂಪೂರ್ಣಗೊಳ್ಳಲಿದ್ದು, ಎಲ್ಲರಿಗೂ ಸಮಾಧಾನಕರವಾಗಿ ಕೆಲಸವನ್ನು ಪೂರ್ತಿಗೊಳಿಸಲಾಗುವುದು. ಸಸ್ಯಹಾರಿ ಹಾಗೂ ಹಣ್ಣುಹಂಪಲುಗಳ ಕೌಂಟರ್ ಗಳನ್ನು ಪ್ರತ್ಯೇಕವಾಗಿ ಮಾಡಲಾಗುವುದು. ಸುಮಾರು 60 ಮಂದಿ ಮೀನು ವ್ಯಾಪಾರಸ್ಥರು ಶಾಸಕರಲ್ಲಿ ಮನವಿಯನ್ನು ಅರ್ಪಿಸಿ ಎತ್ತರದಲ್ಲಿ ಮೀನು ಮಾರಾಟ ಮಾಡಲು ಕಷ್ಟವಾಗುತ್ತದೆ. ಅದರ ಬದಲಿಗೆ ನೆಲದಲ್ಲಿ ಮಾರುವ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ. ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ಅವರ ಬೇಡಿಕೆಯನ್ನು ಪರಿಶೀಲಿಸಿ ನ್ಯಾಯ ಒದಗಿಸಿಕೊಡುವುದಾಗಿ ಹೇಳಿದರು. ನಗರದ ಕದ್ರಿ ಮಾರ್ಕೆಟ್ ಹಾಗೂ ಕಂಕನಾಡಿ ಮಾರ್ಕೆಟ್ ಕಾಮಗಾರಿ ವಿಷಯ ಸರಕಾರದ ಕ್ಯಾಬಿನೆಟ್ ಗೆ ಹೋಗಿದೆ. ಸೆಂಟ್ರಲ್ ಮಾರ್ಕೆಟ್ ಅಭಿವೃದ್ಧಿ ಕಾಮಗಾರಿಯು ಸ್ಮಾರ್ಟ್ ಸಿಟಿ ಪ್ಯಾಕೆಟ್ ನಲ್ಲಿದೆ.
ಈ ಸಂದರ್ಭದಲ್ಲಿ ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್, ಮಹಾನಗರ ಪಾಲಿಕೆಯ ಹಣಕಾಸು ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಮಾಜಿ ಕಾರ್ಪೋರೇಟರ್ ಕಮಲಾಕ್ಷ ಸಾಲ್ಯಾನ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ಕಾಂಚನ್, ದೀಪಕ್ ಶ್ರೀಯಾನ್, ಚೇತನ್ ಕುಮಾರ್ ಉರ್ವ, ಗುತ್ತಿಗೆದಾರ ಆಸೀಫ್, ಮೂಡ ಆಯುಕ್ತ ಶ್ರೀಕಾಂತ್ ರಾವ್, ಪಾಳಿಕೆ ಅಧೀಕ್ಷಕ ಅಭಿಯಂತರ ರಂಗನಾಥ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.